

ಬೆಂಗಳೂರು: ನಟಿ ಪ್ರಿಯಾಂಕಾ ಉಪೇಂದ್ರ ಅವರನ್ನು ಸಾಫ್ಟ್ ಪಾತ್ರಗಳಲ್ಲಿ ನೋಡಿದ್ದೇ ಹೆಚ್ಚು. ಆದರೆ, ಅದೇ ಪ್ರಿಯಾಂಕಾ ಉಗ್ರಾವತಾರ ತಾಳಿದರೆ? ಹೌದು, ಇದುವರೆಗೂ ಮಾಡದ ಒಂದು ಪಾತ್ರವನ್ನು ‘ಉಗ್ರಾವತಾರ’ ಚಿತ್ರದಲ್ಲಿ ಮಾಡುವುದಕ್ಕೆ ಹೊರಟಿದ್ದಾರೆ ಪ್ರಿಯಾಂಕಾ ಉಪೇಂದ್ರ. ಖಾಕಿ ತೊಟ್ಟು, ಸಮಾಜದೊಳಗಿನ ಕೆಲ ದುಷ್ಟ ಶಕ್ತಿಗಳ ಹೆಡೆಮುರಿಕಟ್ಟುವ ಕೆಲಸವೂ ಅವರಿಂದ ಈ ಚಿತ್ರದಲ್ಲಾಗುತ್ತಿದೆ.
‘ಇದೊಂದು ಕಮರ್ಷಿಯಲ್ ಸಿನಿಮಾ. ನಾನಿಲ್ಲಿ ಸೀರಿಯಸ್ ಪೊಲೀಸ್ ಅಧಿಕಾರಿ. ಈ ಹಿಂದಿನ ಸಿನಿಮಾಗಳಂತೆ ಅದೇ ಕಳ್ಳ-ಪೊಲೀಸ್ ಆಟ ಇಲ್ಲಿಲ್ಲ. ಇಡೀ ಸಿನಿಮಾ ಪ್ರಸ್ತುತತೆ ಬಗ್ಗೆ ಮಾತನಾಡಲಿದೆ. ನಮ್ಮ ನಡುವಿನ ಘಟನೆಗಳನ್ನೇ ಸ್ಪೂರ್ತಿಯನ್ನಾಗಿಸಿ ಗುರುಮೂರ್ತಿ ಸಿನಿಮಾ ಮಾಡಿದ್ದಾರೆ. ಮೊದಲ ಬಾರಿಗೆ ನಾನೇ ಸಾಹಸವನ್ನೂ ಮಾಡಿದ್ದೇನೆ’ ಎನ್ನುವ ಪ್ರಿಯಾಂಕಾ, ‘ಈ ಸಿನಿಮಾದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ ಎಂಬ ಅಂಶವನ್ನೂ ಈ ಚಿತ್ರದಲ್ಲಿ ಹೇಳಿದ್ದೇವೆ’ ಎನ್ನುತ್ತಾರವರು.
ಈ ಹಿಂದೆ ‘ಸೌಂದರ್ಯ ನಿಲಯ’ ಚಿತ್ರ ಮಾಡಿದ್ದ ಗುರುಮೂರ್ತಿ ಅವರಿಗಿದು ಎರಡನೇ ಸಿನಿಮಾ. ‘ಪ್ರಸ್ತುತ ಸಮಾಜ ವ್ಯಸನಗಳಿಂದ ತುಂಬಿ ಹೋಗಿದೆ. ಕೊಲೆ, ಸುಲಿಗೆಯೂ ಹೆಚ್ಚಾಗುತ್ತಿವೆ. ಅವೆಲ್ಲವನ್ನೂ ಒಬ್ಬ ಮಹಿಳಾ ಪೊಲೀಸ್ ಅಧಿಕಾರಿ ಹೇಗೆ ಎದುರಿಸುತ್ತಾಳೆ ಎಂಬುದೇ ‘ಉಗ್ರಾವತಾರ’ ಎಂಬುದು ನಿರ್ದೇಶಕರ ಮಾತು. ನಟ ಸುಮನ್ ಇಲ್ಲಿ ಹಿರಿಯ ಪೊಲೀಸ್ ಅಧಿಕಾರಿಯಾಗಿದ್ದಾರೆ.