

‘ಹರಿಹರ ವೀರಮಲ್ಲು ಭಾಗ-1’ರ ಬಳಿಕ ನಟ ಪವನ್ ಕಲ್ಯಾಣ್ ಅಭಿನಯದ ಮತ್ತೊಂದು ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ. ಅದುವೇ ‘ಓಜಿ: ದೇ ಕಾಲ್ ಹಿಮ್’. ‘ಸಾಹೋ’ ಖ್ಯಾತಿಯ ಸುಜಿತ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. 2022ರಲ್ಲಿಯೇ ಸೆಟ್ಟೇರಿದ್ದ ಈ ಸಿನಿಮಾದ ಶೂಟಿಂಗ್ ಆರಂಭದ ಬಳಿಕ ಪವನ್ ಕಲ್ಯಾಣ್ ಆಂಧ್ರಪ್ರದೇಶ ರಾಜಕಾರಣದಲ್ಲಿ ಸಕ್ರಿಯರಾದರು. ಹಾಗಾಗಿ, ಶೂಟಿಂಗ್ ವಿಳಂಬವಾಗಿತ್ತು. ಇದೀಗ, ಚಿತ್ರೀಕರಣ ಪೂರ್ಣಗೊಳಿಸಿರುವ ‘ಓಜಿ’ ಇದೇ ಸೆಪ್ಟೆಂಬರ್ 25ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಇನ್ನು ಈ ಚಿತ್ರದಲ್ಲಿ ಪವನ್ ಕಲ್ಯಾಣ್‌ಗೆ ಬೆಂಗಳೂರು ಮೂಲದ ‘ಒಂದ್ ಕಥೆ ಹೇಳ್ಲಾ’ ಖ್ಯಾತಿಯ ಪ್ರಿಯಾಂಕಾ ಮೋಹನ್ ಜೋಡಿಯಾಗಿದ್ದಾರೆ. ಪ್ರಿಯಾಂಕಾ ‘ಓಜಿ’ಯಲ್ಲಿ ನಟಿಸುತ್ತಿರುವುದು ಗೊತ್ತಾಗಿತ್ತಾದರೂ, ಆದರೆ ಅವರ ಪಾತ್ರವೇನು ಎಂಬುದನ್ನು ತಂಡ ರಿವೀಲ್ ಮಾಡಿರಲಿಲ್ಲ. ಇದೀಗ ಬಿಡುಗಡೆ ಹಾದಿಯಲ್ಲಿರುವಾಗ ಚಿತ್ರತಂಡ ಪ್ರಿಯಾಂಕಾ ಮೋಹನ್ ಪಾತ್ರದ ಸ್ಟ್‌ಲುಕ್ ಬಿಡುಗಡೆ ಮಾಡಿದ್ದು, ಕಣ್ಮಣಿ ಎಂಬ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತಿದ್ದಾರೆ. ‘ಪ್ರತಿ ಬಿರುಗಾಳಿಗೂ ಶಾಂತತೆ ಬೇಕಾಗುತ್ತದೆ’ ಎಂಬ ಅಡಿಬರಹ ಬರೆಯಲಾಗಿದೆ. ಸಾಂಪ್ರಾದಾಯಿಕ ಸೀರೆಯ ಉಡುಗೆಯಲ್ಲಿರುವ ಅವರು ತಣ್ಣನೆಯ ನಗು ಬೀರಿದ್ದಾರೆ. ಗ್ಯಾಂಗ್‌ಸ್ಟರ್ ಕಥೆಯಲ್ಲಿ ಪ್ರಿಯಾಂಕಾ ಪಾತ್ರ ಹೇಗೆ ಸಾಗುತ್ತದೆ ಎಂಬುದು ಸದ್ಯದ ಕುತೂಹಲ. ಇದು ಹೊರತುಪಡಿಸಿ, ಪ್ರಿಯಾಂಕಾ ಮೋಹನ್ ಸದ್ಯ ತಮಿಳು ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. -ಏಜೆನ್ಸೀಸ್