ಪ್ರಿಯಾಂಕಾ ಫ್ಯಾಂಟಸಿ - ಅಗ್ನಿಸಾಕ್ಷಿ ಬೆಡಗಿಗೆ ಇಲ್ಲಿಯೂ ನೆಗೆಟಿವ್ ಶೇಡ್

Priyanka
Published on

ಬೆಂಗಳೂರು : ಕಿರುತೆರೆ ಮೂಲಕ ಬೆಳ್ಳಿತೆರೆಗೆ ಸಾಕಷ್ಟು ನಟಿಯರು ಈಗಾಗಲೇ ಎಂಟ್ರಿ ಪಡೆದು ಮಿಂಚುತ್ತಿದ್ದಾರೆ. ಇದೀಗ ಆ ಸಾಲಿಗೆ ನೂತನವಾಗಿ ಸೇರ್ಪಡೆಗೊಂಡಿದ್ದಾರೆ ‘ಅಗ್ನಿಸಾಕ್ಷಿ’ ಧಾರಾವಾಹಿ ಖ್ಯಾತಿಯ ಪ್ರಿಯಾಂಕಾ. ನಿರ್ದೇಶಕ ಪವನ್ ‘ಫ್ಯಾಂಟಸಿ’ ಶೀರ್ಷಿಕೆಯ ಸಿನಿಮಾ ಮಾಡಿದ್ದು, ಇದರಲ್ಲಿ ನೆಗೆಟಿವ್ ಶೇಡ್​ನ ಪಾತ್ರ ನಿಭಾಯಿಸಿದ ಖುಷಿಯಲ್ಲಿದ್ದಾರೆ.

‘ನಟನೆಯಲ್ಲಿ ನೆಗೆಟಿವ್ ಪಾಸಿಟಿವ್ ಎಂದು ನಾನು ಅಳತೆ ಮಾಡುವುದಿಲ್ಲ. ಪಾತ್ರ ನೋಡಿ, ಆ ಪಾತ್ರದಲ್ಲಿ ನನ್ನ ನಟನೆಯನ್ನು ಎಷ್ಟರ ಮಟ್ಟಿಗೆ ತೋರಿಸಬಹುದು, ಸ್ಕೋಪ್ ಎಷ್ಟಿದೆ ಎಂಬುದನ್ನಷ್ಟೇ ನಾನು ಗಮನಿಸುತ್ತೇನೆ. ಈಗಾಗಲೇ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರ ಮಾಡಿದ್ದೆ. ಇದೀಗ ಅದು ಬೆಳ್ಳಿತೆರೆ ಮೇಲೆಯೂ ಮುಂದುವರಿದಿದೆ. ಹಾಗಂತ ನೆಗೆಟಿವ್ ಪಾತ್ರಗಳಿಗೆ ನಾನು ಸೀಮಿತ ಆಗಲಾರೆ. ಗ್ಲಾಮರಸ್ ಪಾತ್ರಗಳಲ್ಲಿಯೂ ನಾನು ಕಾಣಿಸಿಕೊಳ್ಳುತ್ತೇನೆ’ ಎಂಬುದು ಪ್ರಿಯಾಂಕಾ ಮಾತು.

ವಿಶೇಷ ಏನೆಂದರೆ, ಫ್ಯಾಂಟಸಿ ಚಿತ್ರದ ಚಿತ್ರೀಕರಣವನ್ನೂ ಮುಗಿಸಿದ್ದಾರೆ ಪ್ರಿಯಾಂಕಾ. ‘ಲಾಕ್​ಡೌನ್ ಶುರುವಾದ ಮೇಲೆ ಕೇವಲ ಕೆಟ್ಟ ವಿಚಾರಗಳನ್ನೇ ಕೇಳುತ್ತಿದ್ದೆ. ಯಾವಾಗ ಒಳ್ಳೆಯ ಸುದ್ದಿ ಕೇಳುತ್ತೇನೋ ಎಂದೆನಿಸಿತ್ತು. ಆಗ ಸಿಕ್ಕಿದ್ದೇ ಫ್ಯಾಂಟಸಿ ಸಿನಿಮಾ. ಇದೀಗ ಶೂಟಿಂಗ್ ಮುಗಿದಿದೆ. ಫೆಬ್ರವರಿಗೆ ಬಿಡುಗಡೆ ಮಾಡುವ ಪ್ಲಾನ್ ಇದೆ’ ಎನ್ನುವ ಪ್ರಿಯಾಂಕಾ, ಮುಂದಿನ ದಿನಗಳಲ್ಲಿ ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲಿಯೂ ಗುರುತಿಸಿಕೊಳ್ಳುತ್ತಾರಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net