

ಬೆಂಗಳೂರು: ಮೂರು ವಾರಗಳ ಹಿಂದಷ್ಟೇ ಒಂದು ಸಿನಿಮಾ ಘೋಷಣೆಯಾಗಿತ್ತು. ‘ಲೈಫ್ ಈಸ್ ಬ್ಯೂಟಿಫುಲ್’ ಆ ಚಿತ್ರದ ಹೆಸರು. ‘ದಿಯಾ’ದಲ್ಲಿ ಹೀರೋ ಆಗಿದ್ದ ಪೃಥ್ವಿ ಅಂಬರ್, ಈ ಚಿತ್ರದ ನಾಯಕ. ಈಗ ಈ ಚಿತ್ರದಿಂದ ಎರಡು ವಿಷಯಗಳು ಹೊರಬಿದ್ದಿವೆ.
ಪ್ರಮುಖವಾಗಿ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ನಟಿಸುತ್ತಿದ್ದಾರೆ. ಈ ಹಿಂದೆ ಲೋಹಿತ್ ನಿರ್ದೇಶನದ ‘ಮಮ್ಮಿ’ ಮತ್ತು ‘ದೇವಕಿ’ ಚಿತ್ರಗಳಲ್ಲಿ ಪ್ರಿಯಾಂಕಾ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದರು.ಈಗ ಲೋಹಿತ್ ನಿರ್ವಿುಸುತ್ತಿರುವ ‘ಲೈಫ್ ಈಸ್ ಬ್ಯೂಟಿಫುಲ್’ ಚಿತ್ರದಲ್ಲೂ ನಟಿಸುತ್ತಿರುವುದು ವಿಶೇಷ.
ಈ ಕುರಿತು ಮಾತನಾಡುವ ಲೋಹಿತ್, ‘ಇದೊಂದು ಎಮೋಷನಲ್ ಸಿನಿಮಾ. ಐದಾರು ಪಾತ್ರಗಳಿವೆ. ಒಂದೊಂದು ಪಾತ್ರ ಸಹ ಇಲ್ಲಿ ಮುಖ್ಯ. ಅದರಲ್ಲಿ ಪ್ರಿಯಾಂಕಾ ಅವರ ಪಾತ್ರವೂ ಒಂದು. ಪ್ರಿಯಾಂಕಾ ಅವರು ಇದುವರೆಗೂ ವಿಭಿನ್ನವಾದ ಪಾತ್ರಗಳನ್ನು ಮಾಡಿಕೊಂಡು ಬಂದಿದ್ದಾರೆ. ಮೊದಲ ಬಾರಿಗೆ ಈ ತರಹದ್ದೊಂದು ಪಾತ್ರವನ್ನು ಅವರು ಪ್ರಯತ್ನಿಸುತ್ತಿದ್ದಾರೆ. ಇದರಲ್ಲಿ ಅವರು ಆರ್ಟಿಸ್ಟ್. ಕ್ಯಾರೋಲಿನ್ ಅಂತ ಪಾತ್ರದ ಹೆಸರು’ ಎಂದು ಪಾತ್ರದ ಬಗ್ಗೆ ಹೇಳುತ್ತಾರೆ. ಇದನ್ನೂ ಓದಿ: ಸಂಜಯ್ ದತ್ ಚಾರ್ಟರ್ಡ್ ಫ್ಲೈಟ್ ಮಾಡಿಕೊಂಡು ದುಬೈಗೆ ಹೋಗಿದ್ದೇಕೆ?
ಈ ಪಾತ್ರದ ಚರ್ಚೆ ಆಗುವಾಗ, ಪ್ರಿಯಾಂಕಾ ಅವರೇ ಸೂಕ್ತ ಎಂದೆನಿಸಿತಂತೆ ಚಿತ್ರತಂಡಕ್ಕೆ. ಜತೆಗೆ, ಅವರು ಆಂಗ್ಲೋ ಇಂಡಿಯನ್ ಪಾತ್ರವನ್ನು ಇದುವರೆಗೂ ಮಾಡಿರಲಿಲ್ಲವಾದ್ದರಿಂದ, ಫ್ರೆಶ್ ಆಗಿರುತ್ತದೆ ಎಂಬ ಕಾರಣಕ್ಕೆ ಅವರನ್ನು ಕೇಳಲಾಗಿದೆ. ಅವರೂ ಒಪ್ಪಿಗೆ ಕೊಟ್ಟು, ಚಿತ್ರದಲ್ಲಿ ನಟಿಸಿದ್ದಾಗಿದೆ.
ಎರಡನೆಯ ವಿಷಯ ಎಂದರೆ, ಈಗಾಗಲೇ ಸದ್ದಿಲ್ಲದೆ ಚಿತ್ರದ ಶೇ. 60ರಷ್ಟು ಮುಗಿದಿದೆಯಂತೆ. ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆದಿದ್ದು, ಅಕ್ಟೋಬರ್ನಲ್ಲಿ ಚಿತ್ರ ಮುಕ್ತಾಯವಾಗಲಿದೆ. ಅರುಣ್ ಕುಮಾರ್ ಮತ್ತು ಸಿಬು ಅಲೋಷಿಯಸ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ನೊಬಿನ್ ಪಾಲ್ ಸಂಗೀತ ಸಂಯೋಜಿಸುತ್ತಿದ್ದಾರೆ.