

ನವದೆಹಲಿ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಪುತ್ರಿ ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸ್ಟೋರಿ ಹಾಕುವುದರ ಮೂಲಕ ಹಂಚಿಕೊಂಡಿದ್ದಾರೆ. ಜತೆಗೆ 'ನನ್ನ ಪ್ರಕಾರ' (I Mean) ಎಂಬ ಶೀರ್ಷಿಕೆ ನೀಡಿದ್ದಾರೆ.
ಪ್ರಿಯಾಂಕ ಚೋಪ್ರಾ ಹಂಚಿಕೊಂಡಿರುವ ಫೋಟೋದಲ್ಲಿ ಮಗಳು ಪೂರ್ತಿ ಫೋಟೋ ಕಾಣುತ್ತಿಲ್ಲ. ಬದಲಾಗಿ ಅರ್ಧ ಮುಖ ಮಾತ್ರ ಬಹಿರಂಗಪಡಿಸಿದ್ದಾರೆ. 2018ರ ಡಿಸೆಂಬರ್ನಲ್ಲಿ ಪ್ರಿಯಾಂಕಾ ಚೋಪ್ರಾ, ಗಾಯಕ ನಿಕ್ ಜೋನಾಸ್ ಅವರೊಂದಿಗೆ ವಿವಾಹವಾಗಿದ್ದರು. ಜೋಧ್ಪುರದ ಉಮೈದ್ ಭವನ್ ಅರಮನೆಯಲ್ಲಿ ಕ್ರಿಶ್ಚಿಯನ್ ಮತ್ತು ಹಿಂದೂ ಸಂಪ್ರದಾಯದಂತೆ ವಿವಾಹ ಕಾರ್ಯಕ್ರಮ ನಡೆದಿತ್ತು.
2022ರ ಜನವರಿಯಲ್ಲಿ ಪ್ರಿಯಾಂಕಾ ಚೋಪ್ರಾ-ನಿಕ್ ಜೋಡಿ ಬಾಡಿಗೆ ತಾಯ್ತತನದ ಮೂಲಕ ಮಗಳನ್ನು ಪಡೆದುಕೊಂಡಿರುವುದಾಗಿ ತಿಳಿಸಿದ್ದರು. ಇದೀಗ ಪ್ರಿಯಾಂಕಾ ಚೋಪ್ರಾ ತಮ್ಮ ಮಗಳ ಮುಖ ಸಂಪೂರ್ಣವಾಗಿ ಕಾಣದಂತೆ ಫೋಟೋ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಪ್ರಿಯಾಂಕ ಅಭಿಮಾನಿಗಳು ಖುಷಿಯಾಗಿದ್ದಾರೆ. ಅಲ್ಲದೇ, ತಮ್ಮ ಮಗಳ ಪೂರ್ಣ ಭಾವಚಿತ್ರವನ್ನು ಹಂಚಿಕೊಳ್ಳುವಂತೆ ಕೇಳಿಕೊಳ್ಳುತ್ತಿದ್ದಾರೆ.
ಪ್ರಿಯಾಂಕಾ ಚೋಪ್ರಾ ಅನೇಕ ಬಾರಿ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಮಗಳ ಫೋಟೋ ಹಂಚಿಕೊಂಡಿದ್ದಾರೆ. ಆದರೆ ಒಂದು ಬಾರಿಯೂ ಮಗಳ ಮುಖ ಕಾಣುವಂತಹ ಫೋಟೋ ಶೇರ್ ಮಾಡಿಲ್ಲ. ಪ್ರತಿ ಬಾರಿಯೂ ಹಾರ್ಟ್ ಇಮೋಜಿ ಬಳಸಿಕೊಂಡು ಮುಖ ಕಾಣದಂತೆ ಮಾಡುತ್ತಿದ್ದರು. ಆದರೆ ಈ ಬಾರಿ ಶೇರ್ ಮಾಡಿರುವ ಫೋಟೋದಲ್ಲಿ ಮುಖದ ಅರ್ಧಭಾಗ ಕಾಣುತ್ತಿದೆ. ಮಗುವಿನ ಕಣ್ಣುಗಳನ್ನು ಪಿಂಕ್ ಬಣ್ಣದ ಬಟ್ಟೆಯಿಂದ ಮುಚ್ಚಿದ್ದಾರೆ.
ಫೋಟೋ ನೋಡಿದ ಅಭಿಮಾನಿಗಳು ಮಗು ಪ್ರಿಯಾಂಕಾ ಚೋಪ್ರಾ ಹೋಲಿಕೆ ಹೊಂದಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಮಗು ಮುದ್ದಾಗಿದೆ ಎಂದು ಹೇಳುತ್ತಿದ್ದಾರೆ.