ಅಸುರನ್ ರಿಮೇಕ್​ನಲ್ಲಿ ಪ್ರಿಯಾಮಣಿ: ವೆಂಕಟೇಶ್ ದಗ್ಗುಬಾಟಿಗೆ ಜೋಡಿ

Priyamani
Published on

ಬೆಂಗಳೂರು: ಬಹುಭಾಷಾ ನಟಿ ಪ್ರಿಯಾಮಣಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಕಂಗನಾ ರಣಾವತ್ ಮುಖ್ಯಭೂಮಿಕೆ ನಿಭಾಯಿಸುತ್ತಿರುವ ‘ತಲೈವಿ’ ಸಿನಿಮಾದಲ್ಲಿ ಶಶಿಕಲಾ ಆಗಿ ಕಾಣಿಸಿಕೊಳ್ಳುವ ತಯಾರಿಯಲ್ಲಿದ್ದಾರೆ. ಹೀಗಿರುವಾಗಲೇ ಈಗ ತೆಲುಗಿನಲ್ಲಿ ಮೂಡಿಬರಲಿರುವ ಬಿಗ್ ಸಿನಿಮಾಕ್ಕೆ ಪ್ರಿಯಾಮಣಿ ಆಯ್ಕೆಯಾಗಿದ್ದಾರೆ. ಡಿಗ್ಲಾಮ್ ಅವತಾರದಲ್ಲಿ ಎದುರಾಗಲಿದ್ದು, ವೆಂಕಟೇಶ್ ದಗ್ಗುಬಾಟಿಗೆ ಜೋಡಿಯಾಗಲಿದ್ದಾರೆ.

ಹೌದು.. ಇತ್ತೀಚೆಗಷ್ಟೇ ತಮಿಳಿನಲ್ಲಿ ಬಿಡುಗಡೆಯಾಗಿದ್ದ ಧನುಷ್ ನಟನೆಯ ‘ಅಸುರನ್’ ಚಿತ್ರವೇ ಈಗ ತೆಲುಗಿನಲ್ಲಿ ರಿಮೇಕ್ ಆಗುತ್ತಿದೆ. ಮೂಲ ಸಿನಿಮಾದಲ್ಲಿ ಮಂಜು ವಾರಿಯರ್ ಮಾಡಿದ್ದ ಪಾತ್ರ ರಿಮೇಕ್​ನಲ್ಲಿ ಪ್ರಿಯಾಮಣಿ ಪಾಲಾಗಿದ್ದು, ಇನ್ನೇನು ಶೂಟಿಂಗ್​ನಲ್ಲೂ ಅವರು ಭಾಗವಹಿಸಲಿದ್ದಾರೆ. ಅಂದಹಾಗೆ, ತಮಿಳು ಲೇಖಕ ಪೂಮಾನಿ ಬರೆದ ‘ವೆಕೈ’ ಕಾದಂಬರಿ ಆಧರಿಸಿ ‘ಅಸುರನ್’ ಸಿನಿಮಾ ನಿರ್ಮಾಣ ಮಾಡಲಾಗಿದೆ. 1980ರ ಕಾಲಘಟ್ಟದಲ್ಲಿ ಗ್ರಾಮೀಣ ಪ್ರದೇಶದಲ್ಲಿನ ಜಾತಿ ವ್ಯವಸ್ಥೆ ಮತ್ತು ರಾಜಕಾರಣವನ್ನು ಪ್ರಧಾನವಾಗಿಟ್ಟುಕೊಂಡು ನಿರ್ದೇಶಕ ವೆಟ್ರಿಮಾರನ್ ‘ಅಸುರನ್’ ಶೀರ್ಷಿಕೆಯಲ್ಲಿ ಸಿನಿಮಾ ಮಾಡಿ ಯಶ ಕಂಡಿದ್ದರು. ಈಗ ಅದೇ ಕಥೆಯನ್ನು ತೆಲುಗಿನ ನೇಟಿವಿಟಿಗೆ ಒಗ್ಗಿಸಿಕೊಂಡು ಶ್ರೀಕಾಂತ್ ಅಡ್ಡಲ ಸಿನಿಮಾ ಮಾಡಲು ಸಜ್ಜಾಗಿದ್ದಾರೆ.

ಈ ಹಿಂದೆ ಇದೇ ಸಿನಿಮಾಕ್ಕೆ ನಟಿ ಶ್ರಿಯಾ ಸರಣ್ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗಿತ್ತಾದರೂ ಆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬೀಳಲಿಲ್ಲ. ಈಗ ಆ ಅವಕಾಶ ಪ್ರಿಯಾಮಣಿಗೆ ಒಲಿದಿದೆ. ಈ ಹಿಂದೆ ವೆಂಕಟೇಶ್ ನಾಯಕನಾಗಿ ಅಭಿನಯಿಸಿದ ‘ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು’, ‘ಬ್ರಹ್ಮೋತ್ಸವಂ’ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ಶ್ರೀಕಾಂತ್ ಮೂರನೇ ಬಾರಿ ವೆಂಕಟೇಶ್ ಜತೆ ಕೈ ಜೋಡಿಸಿದ್ದಾರೆ. ಸುರೇಶ್ ಬಾಬು ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಇತ್ತ ‘ತಲೈವಿ’, ‘ವಿರಾಟ ಪಾರವಂ 1992’, ‘ಸಿರಿವೆನ್ನಿಲ್ಲಾ’ ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗುತ್ತಿರುವ ‘ಡಾಕ್ಟರ್ 56’ ಚಿತ್ರದಲ್ಲಿಯೂ ಪ್ರಿಯಾಮಣಿ ತೊಡಗಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net