

ಬೆಂಗಳೂರು: ಹೊಂಬಾಳೆ ಫಿಲಂಸ್ನ ವಿಜಯ್ಕುಮಾರ್ ಕಿರಗಂದೂರು ಇತ್ತೀಚೆಗೆ ಕೇರಳಕ್ಕೆ ಹೋಗಿ ಮಾಲಿವುಡ್ ಸ್ಟಾರ್ ನಟ ಪೃಥ್ವಿರಾಜ್ ಅವರನ್ನು ಭೇಟಿ ಮಾಡಿ ಬಂದಿದ್ದರು. ‘ಕೆಜಿಎಫ್ 2’ ಚಿತ್ರದ ಮಲಯಾಳಂ ಅವತರಣಿಕೆಯನ್ನು ಕೇರಳದಲ್ಲಿ ಬಿಡುಗಡೆ ಮಾಡುವುದಕ್ಕೆ ಪೃಥ್ವಿರಾಜ್ ಒಪ್ಪಿಕೊಂಡಿದ್ದಕ್ಕೆ ಖುಷಿಪಟ್ಟಿದ್ದರು. ಈ ಸಂಬಂಧ ಇಷ್ಟಕ್ಕೇ ಸೀಮಿತವಲ್ಲ.
ಹೊಂಬಾಳೆ ಫಿಲಂಸ್ ನಿರ್ಮಾಣದ ಇನ್ನೊಂದು ಚಿತ್ರದಲ್ಲಿ ಪೃಥ್ವಿರಾಜ್ ನಟಿಸುತ್ತಿದ್ದು, ಆ ವಿಷಯವನ್ನು ರಹಸ್ಯವಾಗಿಡಲಾಗಿತ್ತು. ಆದರೆ, ಈ ರಹಸ್ಯವನ್ನು ನಟ ಪ್ರಭಾಸ್ ಬಯಲು ಮಾಡಿದ್ದಾರೆ. ಹೊಂಬಾಳೆಯ ‘ಸಲಾರ್’ನಲ್ಲಿ ಪೃಥ್ವಿರಾಜ್ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಘೋಷಿಸಿದ್ದಾರೆ. ಪ್ರಭಾಸ್ ಅಭಿನಯದ ‘ರಾಧೇ ಶ್ಯಾಮ್ ಚಿತ್ರವು ನಾಳೆ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಪ್ರಚಾರಕ್ಕಾಗಿ ಪ್ರಭಾಸ್, ಇತ್ತೀಚೆಗೆ ಕೇರಳಕ್ಕೆ ಹೋಗಿದ್ದರು.
ಈ ಸಂದರ್ಭದಲ್ಲಿ ಮಾತನಾಡಿರುವ ಪ್ರಭಾಸ್, ‘ರಾಧೆ ಶ್ಯಾಮ್ ಚಿತ್ರದ ಮಲಯಾಳಂ ಅವತರಣಿಕೆಗೆ ಹಿನ್ನೆಲೆ ಧ್ವನಿ ನೀಡಿದ್ದಕ್ಕೆ ಪೃಥ್ವಿರಾಜ್ಗೆ ಧನ್ಯವಾದ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ, ‘ಸಲಾರ್’ನಲ್ಲಿ ಪೃಥ್ವಿರಾಜ್ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಬಾಯ್ಬಿಟ್ಟಿದ್ದಾರೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ‘ಸಲಾರ್’ ಚಿತ್ರವು ಏ. 14ಕ್ಕೆ ಬಿಡುಗಡೆಯಾಗಬೇಕಿತ್ತು. ಅದೇ ದಿನ ‘ಕೆಜಿಎಫ್ 2’ ಬಿಡುಗಡೆಯಾಗುತ್ತಿರುವುದರಿಂದ, ಚಿತ್ರ ಅನಿರ್ದಿಷ್ಟಾವಧಿ ಮುಂದಕ್ಕೆ ಹೋಗಿದೆ. ‘ಸಲಾರ್’ ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದೆ ಎಂದು ಹೇಳಲಾಗುತ್ತಿದ್ದು, ಚಿತ್ರತಂಡದವರು ಈ ಬಗ್ಗೆ ಇನ್ನಷ್ಟೇ ಸ್ಪಷ್ಟನೆ ನೀಡಬೇಕಿದೆ.