ದುಬೈನಲ್ಲಿದ್ದಾನೆ ರಿಯಲ್ ಏಕ್​ಲವ್​ಯು

ek love you feb 20 2020
Published on

‘ಏಕ್​ಲವ್​ಯು ಸಿನಿಮಾದ ನಿಜವಾದ ಹೀರೋ-ಹೀರೋಯಿನ್ ಬೇರೆಯೇ ಇದ್ದಾರೆ..’ ಎನ್ನುವ ಮೂಲಕ ನಿರ್ದೇಶಕ ‘ಜೋಗಿ’ ಪ್ರೇಮ್ ಚಿತ್ರದ ಕುರಿತ ಕುತೂಹಲ ಹೆಚ್ಚಿಸಿದ್ದಾರೆ. ಅಂದಹಾಗೆ ಈ ವಿಷಯವನ್ನು ಅವರು ಬಹಿರಂಗ ಪಡಿಸಿದ್ದು ಸಿನಿಮಾದ ಟೀಸರ್ ಬಿಡುಗಡೆ ಸಮಾರಂಭದಲ್ಲಿ.

ಟೀಸರ್ ರಿಲೀಸ್ ಬಳಿಕ ಮಾತನಾಡಿದ ಅವರು, ‘ಇದು ನೈಜ ಘಟನೆ ಆಧಾರಿತ ಕಥೆ. ಈ ಕಥೆಯ ಹೀರೋ-ಹೀರೋಯಿನ್ ಇಬ್ಬರೂ ಮದುವೆಯಾಗಿ ದುಬೈನಲ್ಲಿದ್ದಾರೆ. ಅದನ್ನೇ ಕಮರ್ಷಿಯಲ್ ಆಗಿ ಸಿನಿಮಾ ರೂಪಕ್ಕೆ ತಂದಿದ್ದೇನೆ’ ಎನ್ನುತ್ತ ಆ ಬಗ್ಗೆ ಹೆಚ್ಚಿನ ಮಾಹಿತಿ ಬಿಟ್ಟುಕೊಡದ ಪ್ರೇಮ್ ಸಿನಿಮಾದ ವಿಶೇಷತೆಗಳ ಕುರಿತು ವಿವರಣೆ ನೀಡಿದರು.

ಚಿತ್ರಕ್ಕೆ ಬಂಡವಾಳ ಹೂಡಿರುವ ನಟಿ ರಕ್ಷಿತಾ ಪ್ರೇಮ್ ಈ ಚಿತ್ರಕ್ಕೆ ನಾಲ್ವರು ಹೀರೋ ಎಂದರು. ‘ಮೊದಲನೆಯದಾಗಿ ನನ್ನ ಅಮ್ಮ ಮಮತಾ ರಾವ್, ಅವರಿಲ್ಲದೆ ಇದ್ದಿದ್ದರೆ ಇವೆಲ್ಲ ಸಾಧ್ಯವಾಗಿರುತ್ತಿರಲಿಲ್ಲ. ಇನ್ನು ನಿರ್ದೇಶಕ ಪ್ರೇಮ್ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ತಮ್ಮ ರಾಣಾ ಉಳಿದ ಹೀರೋಗಳು’ ಎಂದು ಚಿತ್ರಕ್ಕಾಗಿ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು. ‘ಅಪ್ಪ-ಅಮ್ಮ, ಅಕ್ಕ, ಭಾವ ಈ ಚಿತ್ರದ ನಾಲ್ಕು ಪಿಲ್ಲರ್​ಗಳು. ಅಕ್ಕ ಇರದಿದ್ದರೆ ಭಾವ ನನಗೆ ಈ ಸಿನಿಮಾ ನಿರ್ದೇಶನ ಮಾಡುತ್ತಿರಲಿಲ್ಲ’ ಎಂದ ನಾಯಕ ರಾಣಾ, ಕಾರ್ಯಕ್ರಮದಲ್ಲೊಮ್ಮೆ ನಗೆಯುಕ್ಕಿಸಿದರು.

‘ನಾನು ಜೋಗಿ ಚಿತ್ರವನ್ನು ಏಳು ಸಲ ನೋಡಿದ್ದೆ. ಪ್ರೇಮ್ ಅವರ ನಿರ್ದೇಶನದ ಸಿನಿಮಾಗಳಲ್ಲಿನ ಕಥೆ, ಸಂಗೀತ ಹಾಗೂ ಅವುಗಳ ಮಾರ್ಕೆಟಿಂಗ್ ಅದ್ಭುತವಾಗಿರುತ್ತದೆ. ಇಲ್ಲಿ ನನ್ನ ಪಾತ್ರದ ಬಗ್ಗೆ ನಾನೇನೂ ಹೇಳುವಂತಿಲ್ಲ’ ಎಂದ ನಾಯಕಿ ರಚಿತಾ ರಾಮ್ ಶೂಟಿಂಗ್ ಕಳೆದಿದ್ದೇ ಗೊತ್ತಾಗಿಲ್ಲ ಎನ್ನುತ್ತ ಚಿತ್ರೀಕರಣದ ಅನುಭವವನ್ನು ಹೇಳಿಕೊಂಡರು. ‘ರಾಣಾ ಪರ್ಫಾರ್ವೆನ್ಸ್ ನೋಡಿ ಮೋಟಿವೇಟ್ ಆಗಿದ್ದೆ, ರಚಿತಾ ನನ್ನ ಮೆಂಟರ್’ ಎಂದು ಇನ್ನೊಬ್ಬ ನಾಯಕಿ ರೀಷ್ಮಾ ಸಿನಿಮಾ ಕುರಿತು ತಮ್ಮ ಅನಿಸಿಕೆ ಹೇಳಿಕೊಂಡರು.

‘ನಾವು ಗ್ರಹಣದ ದಿನವೂ ಶೂಟಿಂಗ್ ಮಾಡಿದ್ದೆವು..’ ಎನ್ನುತ್ತ ಹಿರಿಯ ಛಾಯಾಗ್ರಾಹಕ ದಿ. ಗೌರಿಶಂಕರ್ ಅವರನ್ನು ಸ್ಮರಿಸಿಕೊಂಡರು ಕ್ಯಾಮರಾಮನ್ ಮಹೇಂದ್ರ ವರ್ಮ. ಸುಚೇಂದ್ರ ಪ್ರಸಾದ್ ಸೇರಿ ಸಿನಿಮಾದಲ್ಲಿ ನಟಿಸಿರುವ ಹಲವಾರು ಕಲಾವಿದರು, ತಂತ್ರಜ್ಞರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net