ಹಳ್ಳಿಗಾಡಿನ ಪ್ರೇಮಯುದ್ಧಂ: ಹಾಡು ಬಿಡುಗಡೆ ಮಾಡಿದ ನಟಿ ರೇಖಾ

Prema Yuddham 10 JAN 20
Published on


‘ಗ್ರಾಮೀಣ ಭಾಗದ ಕಥೆಯನ್ನಾಧರಿಸಿ ಅದರಲ್ಲೊಂದಿಷ್ಟು ಪ್ರೀತಿ-ಪ್ರೇಮದ ಅಂಶಗಳನ್ನು ತುಂಬಿ ಅನೇಕ ಸಿನಿಮಾಗಳು ಈಗಾಗಲೇ ತೆರೆಕಂಡಿವೆ. ಆದರೆ, ನಮ್ಮ ‘ಪ್ರೇಮಯುದ್ಧಂ’ ಸಿನಿಮಾ ಅವೆಲ್ಲವುಗಳಿಗಿಂತ ಭಿನ್ನ’ ಎಂದು ಹೇಳಿಕೊಳ್ಳುತ್ತಾರೆ ನಿರ್ದೇಶಕ ಶ್ರೀಮಂಜು. ಇತ್ತೀಚೆಗಷ್ಟೇ ನಟಿ ರೇಖಾ ಕಡೆಯಿಂದ ಹಾಡುಗಳನ್ನು ಅನಾವರಣ ಮಾಡಿಕೊಂಡಿತು ಚಿತ್ರತಂಡ.

‘ಕಾರ್​ನಲ್ಲಿ ಹೋಗುತ್ತಿದ್ದಾಗ, ದಿಢೀರನೇ ಕಾರ್ ಪಂಕ್ಚರ್ ಆಯಿತು. ಆಗ ಅಲ್ಲೇ ಬೆಟ್ಟದ ಮೇಲಿನ ದೇವಸ್ಥಾನಕ್ಕೆ ಹೋದೆವು. ವಿಚಿತ್ರವಾದ ಅನುಭವವೂ ಆಯಿತು. ಯಾರೋ ಕೂಗಿದಂತಾಯಿತು. ಹಾಗೆ ಕೂಗಿದ್ದನ್ನೇ ಕಥೆಯನ್ನಾಗಿಸಿಕೊಂಡು, ‘ಪ್ರೇಮಯುದ್ಧಂ’ ಸಿನಿಮಾ ಮಾಡಿದ್ದೇನೆ’ ಎಂದರು ನಿರ್ದೇಶಕರು.

ಕನ್ನಡದ ಜತೆಗೆ ತೆಲುಗು ಮತ್ತು ತಮಿಳು ಪ್ರೇಕ್ಷಕರನ್ನೂ ಸೆಳೆಯುವ ಉದ್ದೇಶದಿಂದ ಚಿತ್ರಕ್ಕೆ ‘ಪ್ರೇಮಯುದ್ಧಂ’ ಎಂಬ ಶೀರ್ಷಿಕೆ ಇಡಲಾಗಿದೆಯಂತೆ. ಅಷ್ಟೇ ಅಲ್ಲ ಅಲ್ಲಿನವರಿಗೆ ಗೊತ್ತಾಗಲೆಂದೇ ಚಿತ್ರದ ಪೋಸ್ಟರ್​ಅನ್ನು ಪೂರ್ತಿ ಆಂಗ್ಲಮಯ ಆಗಿಸಿದೆಯಂತೆ. ‘ಚಿತ್ರದಲ್ಲಿ ನಾವು ಮೊಬೈಲ್​ಫೋನ್ ಇಲ್ಲದೆ ಕಥೆ ಹೇಳಲು ಪ್ರಯತ್ನಿಸಿದ್ದೇವೆ. ಹಳ್ಳಿಗಾಡಿನ ಸುತ್ತಮುತ್ತ ನಡೆಯುವ ಕಥೆಯಾದ್ದರಿಂದ ಎಲ್ಲಿಯೂ ಮೊಬೈಲ್ ಕಾಣಿಸುವುದಿಲ್ಲ’ ಎಂದರು ಶ್ರೀಮಂಜು.

ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಕಾರ್ತಿಕ್ ವೆಂಕಟೇಶ್ ಸಂಗೀತ ನೀಡಿದ್ದಾರೆ. ಗುರುಮೂರ್ತಿ ಈ ಚಿತ್ರದ ನಿರ್ವಪಕರು. ಟೆಕ್ಕಿ ಆಗಿರುವ ಅನಿಲ್ ‘ಪ್ರೇಮಯುದ್ಧಂ’ ಚಿತ್ರದಲ್ಲಿ ನಾಯಕನಾದರೆ, ಅವರಿಗೆ ಪಲ್ಲವಿ ಜೋಡಿ ಆಗಿದ್ದಾರೆ. ಸಿರಿ ಮ್ಯೂಸಿಕ್ ಹಾಡುಗಳನ್ನು ಹೊರತಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net