ಆಸ್ಕರ್ ಗೆದ್ದ ಖುಷಿಯಲ್ಲಿ ಪ್ರೇಮಂ ಪೂಜ್ಯಂ

Prem
Published on

ಬೆಂಗಳೂರು: ಅದೆಷ್ಟು ಬಾರಿ ಬಿಡುಗಡೆಯ ದಿನಾಂಕ ಫಿಕ್ಸ್ ಆಗಿ, ಚಿತ್ರವನ್ನು ಮುಂದೂಡಲಾಯಿತೋ ಗೊತ್ತಿಲ್ಲ. ಚಿತ್ರ ಮುಗಿದು ಒಂದು ವರ್ಷದ ಮೇಲಾದರೂ ಕಾರಣಾಂತರಗಳಿಂದ ಮುಂದಕ್ಕೆ ಹೋಗುತ್ತಲೇ ಇರುವ ‘ನೆನಪಿರಲಿ’ ಪ್ರೇಮ್ ಅಭಿನಯದ ‘ಪ್ರೇಮಂ ಪೂಜ್ಯಂ’ ಚಿತ್ರವು ಅ.29ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಅದಕ್ಕೂ ಮುನ್ನ, ಇತ್ತೀಚೆಗೆ ಚಿತ್ರದ ಟ್ರೇಲರ್ ಸಹ ಬಿಡುಗಡೆಯಾಗಿದೆ. ಟ್ರೇಲರ್ ಬಿಡುಗಡೆಗೆಂದೇ ಚಿತ್ರತಂಡದವರು ದೊಡ್ಡ ಸಮಾರಂಭವನ್ನು ಮಾಡಿ, ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ‘ಪ್ರೇಮಂ ಪೂಜ್ಯಂ’ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಡಾ. ರಾಘವೇಂದ್ರ, ‘ನಾನು ಮೂಲತಃ ವೈದ್ಯ. ಕ್ಲಿನಿಕ್​ನಲ್ಲಿ ಕಥೆ ಶುರುವಾಯಿತು. ಕಾರ್​ನಲ್ಲಿ ಬೆಳೆಯುತ್ತಾ ಹೋಯಿತು. ಬಾಥ್​ರೂಂನಲ್ಲಿ ಟ್ಯೂನ್ ಆಯಿತು. ಪುಟಗಟ್ಟಲೆ ಬರೆದಿಟ್ಟುಕೊಂಡೆ. ಆದರೆ, ಅದು ಚಿತ್ರವಾಗುತ್ತದೆಂಬ ನಂಬಿಕೆ ಇರಲಿಲ್ಲ. ನಮ್ಮ ತಂಡದ ಸಹಕಾರ ಮತ್ತು ಪ್ರೋತ್ಸಾಹದಿಂದ ನನ್ನ ಕನಸು ನನಸಾಗುತ್ತಾ ಹೋಯಿತು. ಇವತ್ತು ನಾನು ಇಲ್ಲಿದ್ದೀನಿ ಎಂದರೆ ಅದು ಬರೀ ಪ್ರತಿಭೆಯಿಂದ ಮಾತ್ರವಲ್ಲ.

ಪ್ರತಿಭೆ ಇರಬಹುದು, ಒಂದೊಳ್ಳೆಯ ತಂಡವಿಲ್ಲದಿದ್ದರೆ ಏನೂ ಸಾಧ್ಯವಿಲ್ಲ’ ಎನ್ನುತ್ತಾರೆ. ಚಿತ್ರವನ್ನು ಜನ ಹೇಗೆ ಸ್ವೀಕರಿಸುತ್ತಾರೋ ಗೊತಿಲ್ಲ, ಆದರೆ ಈಗಲೇ ಆಸ್ಕರ್ ಪ್ರಶಸ್ತಿ ಗೆದ್ದಷ್ಟು ಖುಷಿಯಾಗುತ್ತಿದೆ ಎನ್ನುವ ನಿರ್ದೇಶಕರು, ‘ಯಾವತ್ತು ಅಂಬರೀಶ್ ಅವರು ನಾಲ್ಕೂವರೆ ಗಂಟೆಗಳ ಕಾಲ ಕಥೆ ಕೇಳಿ ಮನೆಗೆ ಹೋಗಿ ಊಟ ಹಾಕಿಸಿದರೋ, ಯಾವತ್ತು ಮಾಸ್ಟರ್ ಆನಂದ್ ಈ ಚಿತ್ರವನ್ನು ನೀವೇ ನಿರ್ದೇಶನ ಮಾಡಿ ಎಂದು ಬೆನ್ನು ತಟ್ಟಿದರೋ, ನನ್ನನ್ನು ಹೇಗಾದರೂ ಸಾಗಹಾಕಬೇಕೆಂದಿದ್ದ ಪ್ರೇಮ್ ಯಾವಾಗ ಕಥೆ ಕೇಳಿ ಚಪ್ಪಾಳೆ ಹೊಡೆದರೋ ಆಗಲೇ ನಾನು ಆಸ್ಕರ್ ಪ್ರಶಸ್ತಿ ಗೆದ್ದಿದ್ದೇನೆ. ಮಿಕ್ಕಿದ್ದೆಲ್ಲವೂ ಬೋನಸ್’ ಎನ್ನುತ್ತಾರೆ. ‘ಕೆಲವೊಂದು ನಾವು ಹುಡುಕಿಕೊಂಡು ಹೋಗುತ್ತೇವೆ. ಕೆಲವೊಂದು ನಮ್ಮನ್ನು ಹುಡುಕಿಕೊಂಡು ಬರುತ್ತವೆ. ಸಿನಿಮಾನೇ ಮಾಡಬಾರದು, ಮಾಡಿದರೆ ನನ್ನ ಮನಸ್ಸಿಗೆ ಇಷ್ಟವಾಗುವ ಸಿನಿಮಾ ಮಾಡಬೇಕು ಅಂದುಕೊಂಡ ಸಮಯದಲ್ಲಿ, ನನ್ನನ್ನು ಹುಡುಕಿಕೊಂಡು ಬಂದ ಸಿನಿಮಾ ‘ಪ್ರೇಮಂ ಪೂಜ್ಯಂ’. 25ನೇ ಚಿತ್ರ ಎಂಬ ಕಾರಣಕ್ಕೆ ನಿಮ್ಮ ಹೆಸರನ್ನೇ ಸಿನಿಮಾಗೂ ಇಟ್ಟಿದ್ದೀರಾ ಎಂದು ಕೆಲವರು ಕೇಳಿದರು. ನಿರ್ದೇಶಕರು ನಾಲ್ಕು ವರ್ಷಗಳ ಹಿಂದೆ ಕಥೆ ಬರೆದಾಗ ಮೊದಲು ಬರೆದಿದ್ದೇ ‘ಪ್ರೇಮಂ ಪೂಜ್ಯಂ’ ಅಂತೆ. ಹಾಗಾಗಿ, ಅದನ್ನೇ ಶೀರ್ಷಿಕೆಯಾಗಿ ಇಡಲಾಗಿದೆ’ ಎನ್ನುತ್ತಾರೆ ಪ್ರೇಮ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net