ಲಾಕ್​ಡೌನ್​ ಸಮಯದಲ್ಲಿ ಪ್ರೇಮ್​ ಎಷ್ಟು ಬದಲಾಗಿದ್ದಾರೆ ನೋಡಿ ...

Prem Final
Published on

ಇದುವರೆಗಿನ ಚಿತ್ರಗಳಲ್ಲಿ, 'ಶತ್ರು' ಎಂಬ ಚಿತ್ರ ಬಿಟ್ಟರೆ ಮಿಕ್ಕೆಲ್ಲಾ ಚಿತ್ರಗಳಲ್ಲೂ ಲವ್ವರ್​ ಬಾಯ್​ ಆಗಿಯೇ ಕಾಣಿಸಿಕೊಂಡವರು. ಅದೊಂದು ಚಿತ್ರದಲ್ಲಿ ಮಾತ್ರ, ಅವರು ರಫ್​ ಆಂಡ್​ ಟಫ್​ ಪೊಲೀಸ್​ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಅದಕ್ಕಾಗಿ ದೇಹವನ್ನೂ ಹುರಿಗೊಳಿಸಿದ್ದರು.

ಈಗ ಹಲವು ವರ್ಷಗಳ ನಂತರ ಅವರು ಮತ್ತೊಮ್ಮೆ ದೇಹವನ್ನು ದಂಡಿಸಿ, ಹುರಿಗೊಳಿಸಿದ್ದಾರೆ. ಈ ಲಾಕ್​ಡೌನ್​ ಸಮಯದಲ್ಲಿ ಸಾಕಷ್ಟು ವರ್ಕೌಟ್​ ಮಾಡಿ, ಸಾಕಷ್ಟು ಬದಲಾಗಿದ್ದಾರೆ. ಇಂಥದ್ದೊಂದು ಬದಲಾವಣೆ ಯಾವುದಾದರೂ ಚಿತ್ರಕ್ಕಾ? ಎಂಬ ಪ್ರಶ್ನೆ ಬರುವುದು ಸಹಜ.

ಹಾಗೇನಿಲ್ಲ. ಪ್ರೇಮ್​ ತಮ್ಮ ದೇಹವನ್ನು ದಂಡಿಸಿರುವುದು ಯಾವುದೇ ಚಿತ್ರಕ್ಕಲ್ಲ.. ಕಳೆದ ನಾಲ್ಕು ತಿಂಗಳಲ್ಲಿ ಲಾಕ್​ಡೌನ್​ನಿಂದ ಪ್ರೇಮ್​ ಮನೆಯಲ್ಲೇ ಇದ್ದರಲ್ಲ. ಆಗ ಸುಮ್ಮನೆ ಕೂರುವುದಕ್ಕಿಂತ ವರ್ಕೌಟ್​ ಮಾಡಿ, ದೇಹವನ್ನು ಹುರಿಗೊಳಿಸಿಕೊಳ್ಳುವುದಕ್ಕೆ ಯೋಚಿಸಿದ ಅವರು, ಅದರಂತೆ ಬಾಡಿ ಬಿಲ್ಡ್​ ಮಾಡಿದ್ದಾರೆ.

ಈ ಕುರಿತು 'ವಿಜಯವಾಣಿ'ಯೊಂದಿಗೆ ಮಾತನಾಡಿರುವ ಅವರು, 'ಇದು ಯಾವುದೇ ಚಿತ್ರಕ್ಕಾಗಿ ಮಾಡಿದ್ದಲ್ಲ. ಮೋಟಿವೇಶನ್​ಗಾಗಿ ಮಾಡಿದ್ದು. ಪ್ರತಿ ದಿನ ನಾಲ್ಕು ಗಂಟೆಗಳ ಕಾಲ ವರ್ಕೌಟ್​ ಮಾಡಿದ್ದೇನೆ. ಬೆಳಿಗ್ಗೆ ಹೊತ್ತು ಕಾರ್ಡಿಯೋ ಮತ್ತು ಯೋಗ ಮಾಡುತ್ತಿದ್ದೆ. ಇನ್ನು ಸಂಜೆ ಹೊತ್ತು ವರ್ಕೌಟ್​ ಮಾಡುತ್ತಿದ್ದೆ' ಎಂದು ಹೇಳಿಕೊಂಡಿದ್ದಾರೆ ಅವರು.

ಇನ್ನು ಅವರು ಸ್ವಲ್ಪ ತೂಕವನ್ನು ಇಳಿಸಿಕೊಂಡಿದ್ದಾರಂತೆ. ಒಟ್ಟಾರೆ ಲಾಕ್​ಡೌನ್​ ಸಮಯದಲ್ಲಿ ತಮ್ಮ ಬಾಡಿಯ ಶೇಪ್​ ಸಾಕಷ್ಟು ಬದಲಾಗಿದೆ ಎಂದು ಖುಷಿಯಾಗಿದ್ದಾರೆ ಅವರು.

ಸದ್ಯ, 'ಪ್ರೇಮಂ ಪೂಜ್ಯಂ' ಎಂಬ ಚಿತ್ರದಲ್ಲಿ ತೊಡಗಿಸಿಕೊಂಡಿರುವ ಅವರು, ಅದರ ಡಬ್ಬಿಂಗ್​ ಸಹ ಮುಗಿಸಿದ್ದಾರೆ. 'ಇನ್ನು ನಾಲ್ಕೇ ದಿನಗಳ ಪ್ಯಾಚ್​ವರ್ಕ್​ ಇತ್ತು. ಮಿಕ್ಕಂತೆ ಚಿತ್ರೀಕರಣ ಮುಗಿದಿತ್ತು. ಇನ್ನೇನು ಶುರು ಮಾಡಬೇಕು ಎನ್ನುವಷ್ಟರಲ್ಲಿ ಲಾಕ್​ಡೌನ್​ ಆಯಿತು. ಇದೀಗ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಸಹ ಬಹುತೇಕ ಮುಗಿದಿದೆ. ಕರೊನಾ ಹಾವಳಿ ಸ್ವಲ್ಪ ಕಡಿಮೆಯಾಗುತ್ತಿದ್ದಂತೆಯೇ, ಬಾಕಿ ಚಿತ್ರೀಕರಣ ಮುಗಿಸಿ, ಚಿತ್ರ ಬಿಡುಗಡೆ ಮಾಡುತ್ತೇವೆ' ಎನ್ನುತ್ತಾರೆ ಪ್ರೇಮ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net