

ಇದೇ ಏಪ್ರಿಲ್ನಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್, ಪ್ರಿಯಕರ ರಣಬೀರ್ ಕಪೂರ್ ಜತೆ ಸಪ್ತಪದಿ ತುಳಿದರು. ಬಳಿಕ ಜೂನ್ನಲ್ಲಿ ಗರ್ಭಿಣಿಯಾಗಿರುವ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಶೇರ್ ಮಾಡಿಕೊಂಡಿದ್ದರು. ಹಾಗಂತ ಅವರು ಸಿನಿಮಾ ನಟನೆಯಿಂದ ಬ್ರೇಕ್ ಪಡೆಯಲಿಲ್ಲ. ಬದಲಾಗಿ ಗರ್ಭಿಣಿಯಾಗಿದ್ದರೂ ತಮ್ಮ ಮೊದಲ ಹಾಲಿವುಡ್ ಚಿತ್ರ ‘ಹಾರ್ಟ್ ಆಫ್ ಸ್ಟೋನ್’ನಲ್ಲಿ ಒಂದು ತಿಂಗಳ ಕಾಲ ನಟಿಸಿ ವಾಪಸ್ಸಾದರು. ಅದರ ಬೆನ್ನಲ್ಲೇ ‘ಬ್ರಹ್ಮಾಸ್ತ್ರ’ ಚಿತ್ರದ ಪ್ರಚಾರದಲ್ಲೂ ತೊಡಗಿದರು. ಹಾಗೆಯೇ ತಾವು ಮೊದಲ ಬಾರಿಗೆ ನಿರ್ವಿುಸಿರುವ ‘ಡಾರ್ಲಿಂಗ್ಸ್’ ಚಿತ್ರದ ಪ್ರಚಾರದಲ್ಲಿ ಸದ್ಯ ಬಿಜಿಯಾಗಿದ್ದಾರೆ.
ಹೀಗೆ ಗರ್ಭಿಣಿಯಾಗಿದ್ದರೂ ಇಷ್ಟೆಲ್ಲಾ ಕೆಲಸ ಮಾಡುತ್ತಿದ್ದೀರಲ್ಲಾ, ಒತ್ತಡ ಆಗುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಆಲಿಯಾ, ‘ನೀವು ಫಿಟ್ ಆಗಿದ್ದು, ಆರೋಗ್ಯಕರವಾಗಿದ್ದರೆ ಗರ್ಭಿಣಿಯಾಗಿದ್ದರೂ ಯಾವುದೇ ರೆಸ್ಟ್ ಪಡೆಯುವ ಅಗತ್ಯವಿಲ್ಲ. ಕೆಲಸ ನನಗೆ ಶಾಂತಿ, ನೆಮ್ಮದಿ ನೀಡುತ್ತದೆ. ಕೆಲಸವೇ ನನ್ನ ಪ್ಯಾಷನ್’ ಎಂದಿದ್ದಾರೆ. ಹಾಗೆಯೇ ಮಾತು ಮುಂದುವರಿಸಿರುವ ಅವರು, ‘ಕೆಲಸ ನನ್ನ ಹೃದಯ ಮತ್ತು ಆತ್ಮವನ್ನು ಜೀವಂತವಾಗಿರಿಸುತ್ತದೆ, ಚಾರ್ಜ್ ಮಾಡುತ್ತದೆ. 100 ವರ್ಷ ಬದುಕಿದ್ದರೆ, ಅಲ್ಲಿಯವರೆಗೂ ಕೆಲಸ ಮಾಡುತ್ತಲೇ ಇರುತ್ತೇನೆ’ ಎಂದು ಕೆಲಸದ ಬಗೆಗಿನ ತಮ್ಮ ಭಕ್ತಿ, ಶ್ರದ್ಧೆಯ ಕುರಿತು ಹೇಳಿಕೊಂಡಿದ್ದಾರೆ ಆಲಿಯಾ ಭಟ್.
ಇತ್ತೀಚೆಗೆ ಬಾಲಿವುಡ್ ಸಿನಿಮಾಗಳ ಬಾಕ್ಸಾಫೀಸ್ ಕಲೆಕ್ಷನ್ ಸಪ್ಪೆಯಾಗಿದ್ದರೂ, ಆಲಿಯಾ ಭಟ್ ಸಕ್ಸಸ್ ಮಾತ್ರ ಕುಗ್ಗಿಲ್ಲ. ಏಕೆಂದರೆ ಅವರು ನಟಿಸಿದ ‘ಗಂಗೂಬಾಯಿ ಕಾಥಿಯಾವಾಡಿ’ ಹಿಟ್ ಎನಿಸಿಕೊಂಡರೆ, ದಕ್ಷಿಣದ ಪ್ಯಾನ್ ಇಂಡಿಯಾ ಚಿತ್ರ ‘ಆರ್ಆರ್ಆರ್’ ಬ್ಲಾಕ್ಬಸ್ಟರ್ ಆಗಿದೆ. ಅದರ ಬೆನ್ನಲ್ಲೇ ಅವರ ಚೊಚ್ಚಲ ನಿರ್ವಣದ ‘ಡಾರ್ಲಿಂಗ್ಸ್’ ಸದ್ಯ ಓಟಿಟಿಯಲ್ಲಿ ನೇರವಾಗಿ ರಿಲೀಸ್ ಆಗುತ್ತಿದ್ದು, ‘ಬ್ರಹ್ಮಾಸ್ತ್ರ’ ಇದೇ ಸೆಪ್ಟೆಂಬರ್ನಲ್ಲಿ ತೆರೆಗೆ ಬರಲಿದೆ. -ಏಜೆನ್ಸೀಸ್