

ಬೆಂಗಳೂರು: ಅಜೇಯ್ ರಾವ್ ಮತ್ತು ರಚಿತಾ ರಾಮ್ ಅಭಿನಯದ 'ಲವ್ ಯೂ ರಚ್ಚು' ಚಿತ್ರದ ಚಿತ್ರೀಕರಣದ ವೇಳೆ ಸಂಭವಿಸಿದ ವಿದ್ಯುತ್ ಅವಘಡದಿಂದಾಗಿ ನಿಧನರಾದ ಫೈಟರ್ ವಿವೇಕ್ ಅವರಿಗೆ ಚಿತ್ರದ ನಿರ್ಮಾಪಕ ಗುರು ದೇಶಪಾಂಡೆ ಅವರ ಪತ್ನಿ ಪ್ರೀತಿಕಾ ದೇಶಪಾಂಡೆ ತಕ್ಷಣವೇ ಐದು ಲಕ್ಷ ಪರಿಹಾರ ಕೊಡುವುದಾಗಿ ಘೋಷಿಸಿದ್ದಾರೆ. ಇನ್ನೈದು ಲಕ್ಷ ರೂ.ಗಳನ್ನು ಗುರು ದೇಶಪಾಂಡೆಗೆ ಜಾಮೀನು ಸಿಕ್ಕ ನಂತರ ಕೊಡುವುದಾಗಿ ಹೇಳಿದ್ದಾರೆ.
'ಲವ್ ಯೂ ರಚ್ಚು' ಚಿತ್ರೀಕರಣ ಸಂದರ್ಭದಲ್ಲಿ ಕರೆಂಟ್ ಹೊಡೆದು ಫೈಟರ್ ವಿವೇಕ್ ಮೃತಪಟ್ಟರೆ, ಇದೇ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿರುವ ರಂಜಿತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣದ ಸಂಬಂಧ ಚಿತ್ರದ ನಿರ್ದೇಶಕ ಶಂಕರ್, ಸಾಹಸ ನಿರ್ದೇಶಕ ವಿನೋದ್ ಹಾಗೂ ಕ್ರೇನ್ ಆಪರೇಟರ್ ಮಹಾದೇವ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಇದಕ್ಕೂ ಮುನ್ನ, ದುರ್ಘಟನೆ ನಡೆದ ದಿನ ನಿರ್ಮಾಪಕ ಗುರು ದೇಶಪಾಂಡೆ, ವಿವೇಕ್ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಕೊಡುವುದಾಗಿ ಘೋಷಿಸಿದ್ದರು. ಈ ವಿಷಯವನ್ನು ವಿವೇಕ್ ಅವರ ಕುಟುಂಬಸ್ಥರೇ ಹೇಳಿಕೊಂಡಿದ್ದರು. ಆದರೆ, ನಂತರ ಗುರು ದೇಶಪಾಂಡೆ ಬಂಧನದ ಭೀತಿಯಿಂದ ತಲೆ ಮರೆಸಿಕೊಂಡಿರುವ ಹಿನ್ನೆಲೆಯಲ್ಲಿ ಅವರ ಪತ್ನಿ ಇದೀಗ ಮೊದಲ ಹಂತವಾಗಿ ಐದು ಲಕ್ಷ ರೂ.ಗಳನ್ನು ಕೊಡುವುದಾಗಿ ಹೇಳಿದ್ದಾರೆ.
ಈ ಕುರಿತು ಬುಧವಾರ ರಾತ್ರಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 'ಸದ್ಯ ವಿವೇಕ್ ಕುಟುಂಬಕ್ಕೆ 5 ಲಕ್ಷ ರೂಪಾಯಿ ನೀಡುತ್ತೇವೆ. ಗುರು ದೇಶಪಾಂಡೆಗೆ ಜಾಮೀನು ದೊರೆತ ಬಳಿಕ ಇನ್ನೈದು ಲಕ್ಷ ರೂಪಾಯಿ ಕೊಡುತ್ತೇವೆ. ಅವಘಡದಲ್ಲಿ ತೀವ್ರವಾಗಿ ಗಾಯಗೊಂಡಿರುವ ರಂಜಿತ್ ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ನಾವೇ ಭರಿಸುತ್ತೇವೆ' ಎಂದು ಪ್ರೀತಿಕಾ ಹೇಳಿದ್ದಾರೆ.