Jumboo Circus Review; ಘಾಟಿ ಅಮ್ಮಂದಿರ ಗಲಾಟೆ, ಚೂಟಿ ಮಕ್ಕಳ ಸರ್ಕಸ್​

asc
Published on

ಚಿತ್ರ: ಜಂಬೂ ಸರ್ಕಸ್​

ನಿರ್ದೇಶನ: ಎಂ.ಡಿ. ಶ್ರೀಧರ್​

ತಾರಾಗಣ: ಪ್ರವಿಣ್​ ತೇಜ್​, ಅಂಜಲಿ ಅನೀಶ್​, ರವಿಶಂಕರ್​, ಅಚ್ಯುತ್​ ಕುಮಾರ್​, ಸ್ವಾತಿ ಗುರುದತ್​, ಲಕ್ಷ್ಮೀ ಸಿದ್ದಯ್ಯ, ನಯನ, ಮೋಹನ್​ ಜುನೇಜ ಮತ್ತಿತರರು

| ಹರ್ಷವರ್ಧನ್​ ಬ್ಯಾಡನೂರು

ಮುರಳಿ (ಅಚ್ಯುತ್​) ಮತ್ತು ಶಂಕರ (ರವಿಶಂಕರ್​) ಪ್ರಾಣದ ಗೆಳೆಯರು. ಎಂತಹ ಗೆಳೆಯರು ಅಂದರೆ ಇಬ್ಬರಿಗೂ ಒಂದೇ ದಿನ ಮಕ್ಕಳು ಹುಟ್ಟುತ್ತವೆ. ಮುರಳಿ ಪತ್ನಿ ಕುಸುಮ (ಸ್ವಾತಿ) ಹೆಣ್ಣುಮಗುಗೆ ಜನ್ಮ ನೀಡಿದರೆ, ಶಂಕರನ ಪತ್ನಿ ಅನಿತಾ (ಲಕ್ಷ್ಮೀ) ಗಂಡು ಮಗುಗೆ ಜನ್ಮ ನೀಡುತ್ತಾರೆ. ಆದರೆ, ಮುರಳಿ ಮತ್ತು ಶಂಕರ ಇಬ್ಬರೂ ಮಕ್ಕಳು ಜನಿಸುತ್ತಲೇ, ಬದಲಿಸಿಕೊಂಡುಬಿಡುತ್ತಾರೆ. ಅಲ್ಲಿಗೆ ಮರುಳಿ, ಕುಸುಮ ದಂಪತಿಯ ಮನೆಗೆ ಗಂಡು ಮಗು ಸೇರಿದರೆ, ಶಂಕರ - ಅನಿತಾ ಜೋಡಿಯ ಮನೆಗೆ ಹೆಣ್ಣುಮಗು ಸೇರುತ್ತದೆ. ಮಕ್ಕಳ ನಾಮಕರಣವನ್ನು ಒಟ್ಟಿಗೆ ಮಾಡಲು ಮುಂದಾದಾಗ ಕುಸುಮ ಮತ್ತು ಅನಿತಾ ಜೋರು ಜಗಳವಾಡಿಕೊಳ್ಳುತ್ತಾರೆ. ಈ ಅಮ್ಮಂದಿರ ಜಗಳ ಎಷ್ಟರ ಮಟ್ಟಿಗೆ ಎಂದರೆ ಅದು ಮಕ್ಕಳಿಗೂ ಅಂಟಿಕೊಂಡಿರುತ್ತದೆ. ಹೀಗಾಗಿ ಆಕಾಶ್​ (ಪ್ರವಿಣ್​) ಮತ್ತು ಅಂಕಿತಾ (ಅಂಜಲಿ) ಕೂಡ ಹಾವು-ಮುಂಗುಸಿಯಂತೆ ಜಗಳವಾಡತೊಡಗುತ್ತಾರೆ.

ಬಾಲ್ಯದಿಂದ ಹಿಡಿದು ಕಾಲೇಜಿನವರೆಗೂ ಹೀಗೆ ಪರಸ್ಪರ ದುಷ್ಮನ್​ಗಳಂತೆ ಬೆಳೆಯುವ ಆಕಾಶ್​ ಮತ್ತು ಅಂಜಲಿ ನಡುವೆ ಗೆಳೆತನ ಮೂಡುತ್ತದೆ. ಅದು ಪ್ರೀತಿಗೆ ನಾಂದಿ ಹಾಡಿ, ಮದುವೆಯ ಹಂತಕ್ಕೂ ಬಂದು ನಿಲ್ಲುತ್ತದೆ. ಹಾಗಾದರೆ ಮುಂದೆ? ಮುರಳಿ, ಶಂಕರ ಮಕ್ಕಳನ್ನು ಬದಲಿಸಿಕೊಳ್ಳಲು ಕಾರಣವೇನು? ಪ್ರಾಣಸ್ನೇಹಿತರ ಗೆಳೆತನ ಮುರಿದು ಬೀಳುತ್ತಾ? ಕುಸುಮ - ಅನಿತಾ ನಡುವೆ ಗೆಳೆತನ ಮೂಡುತ್ತಾ? ಆಕಾಶ್​& ಅಂಜಲಿ ಮದುವೆಯಾಗುತ್ತಾರಾ? ಕುತೂಹಲವಿದ್ದರೆ "ಜಂಬ ಸರ್ಕಸ್​' ನೋಡಿ.

ಎಲ್ಲವೂ ಅಂದುಕೊಂಡಂತಾಗಿದ್ದರೆ "ಜಂಬೂ ಸರ್ಕಸ್​' ಮೂರ್ನಾಲ್ಕು ವರ್ಷಗಳ ಹಿಂದೆಯೇ ತೆರೆಗೆ ಬರಬೇಕಿತ್ತು. ಕಾರಣಾಂತರಗಳಿಂದ ತಡವಾಗಿದೆಯಾದರೂ, 123 ನಿಮಿಷಗಳ ಚಿತ್ರವಾದ ಕಾರಣ, ಬೋರ್​ ಹೊಡಿಸದೇ ನೋಡಿಸಿಕೊಂಡು ಹೋಗುತ್ತದೆ. ಚಿತ್ರದಲ್ಲಿ ಇರುವ, ಬರುವ ಎಲ್ಲ ಪಾತ್ರಗಳೂ ಅಲ್ಲಲ್ಲಿ ನಗಿಸುತ್ತವೆ. ಕೊನೆಗೊಂದು ಉತ್ತಮ ಸಂದೇಶ ಕೊಟ್ಟು ಪ್ರೇಕ್ಷಕರನ್ನು ಥಿಯೇಟರ್​ನಿಂದ ಕಳುಹಿಸಿಕೊಟ್ಟಿದ್ದಾರೆ ನಿರ್ದೇಶಕ ಎಂ.ಡಿ.ಶ್ರೀಧರ್​. ವಾಸುಕಿ ವೈಭವ್​ ಸಂಗೀತದಲ್ಲಿ "ಮಂದಹಾಸ', "ಲೀಲಾಜಾಲ' ಅಂದವಾಗಿ ಮೂಡಿಬಂದಿವೆ. ಕುಟುಂಬ ಸಮೇತ ಹೋಗಿ ಕೆಲ ಕಾಲ ನಗಲು ಇಚ್ಛಿಸುವವರು ಮತ್ತು ರೊಮ್ಯಾಂಟಿಕ್​ ಡ್ರಾಮಾಪ್ರಿಯರಿಗೆ "ಜಂಬೂ ಸರ್ಕಸ್​' ಇಷ್ಟವಾಗಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net