

ಬೆಂಗಳೂರು: ಕಳೆದ ವರ್ಷದ ಗಮನ ಸೆಳೆದ ಚಿತ್ರಗಳ ಪೈಕಿ ಪ್ರವೀಣ್ ಅಭಿನಯದ ಮತ್ತು ಶಶಾಂಕ್ ನಿರ್ದೇಶನದ 'ಲವ್ 360' ಸಹ ಒಂದು. ಆ ಚಿತ್ರದಲ್ಲಿ ನಟಿಸಿದ್ದ ಪ್ರವೀಣ್, ಆ ನಂತರ ಏನಾದರೂ ಎಂಬ ಸುದ್ದಿ ಇರಲಿಲ್ಲ. ಈಗ ಪ್ರವೀಣ್ ಹೊಸ ಚಿತ್ರವೊಂದರ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಅದೇ 'ದೇಸಾಯಿ',
ಹಿಂದಿನಿಂದಲೂ ದೇಸಾಯಿ ಮನೆತನಕ್ಕೆ ಅದರದೆ ಆದ ಪರಂಪರೆ ಇದೆ. ಇದನ್ನು ಈ ಚಿತ್ರದ ಮೂಲಕ ತೆರೆಗೆ ತರುತ್ತಿದ್ದಾರೆ ನಿರ್ಮಾಪಕ ಮಹಾಂತೇಶ್ ವಿ ಚೊಳಚಗುಡ್ಡ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ಬಾಗಲಕೋಟೆಯ ಮುಚಖಂಡಿಯ ಶ್ರೀ ವೀರಭದ್ರೇಶ್ವರಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಶಾಸಕರಾದ ಶ್ರೀ ವೀರಣ್ಣ ಚರಂತಿಮಠ ಅವರು ಆರಂಭಫಲಕ ತೋರಿದರೆ, ವನಶ್ರೀಮಠ ವಿಜಯಪುರದ ಡಾ! ಜಯಬಸವಕುಮಾರ ಮಹಾಸ್ವಾಮಿಗಳು ಕ್ಯಾಮೆರಾ ಚಾಲನೆ ಮಾಡಿ, ಚಿತ್ರತಂಡಕ್ಕೆ ಶುಭಕೋರಿದರು.
ಈ ಚಿತ್ರವನ್ನು ನಾಗಿರೆಡ್ಡಿ ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಮೊದಲ ಚಿತ್ರ. ಇನ್ನು, ನಿರ್ಮಾಪಕ ಮಹಾಂತೇಶ ಅವರಿಗೆ ಗತಕಾಲದ, ತನ್ನದೇ ಆದ ಪರಂಪರೆ ಹೊಂದಿರುವ ದೇಸಾಯಿ ಮನೆತನದ ಕುರಿತು ಸಿನಿಮಾ ಮಾಡಬೇಕು ಎಂಬ ಆಸೆ ಇತ್ತಂತೆ. ಅದೇ ಕಾರಣಕ್ಕೆ ಅವರು ಈ ಚಿತ್ರ ನಿರ್ಮಿಸುತ್ತಿದ್ದಾರೆ. ಜೈ ಆನಂದ್ ಛಾಯಾಗ್ರಹಣ, ಸಾಯಿಕಾರ್ತಿಕ್ ಸಂಗೀತ ಈ ಚಿತ್ರಕ್ಕಿದೆ. 'ದೇಸಾಯಿ' ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಉತ್ತರ ಕರ್ನಾಟಕದಲ್ಲೇ ನಡೆಯಲಿದೆಯಂತೆ.
ಈ ಚಿತ್ರ ತನ್ನ ನಟನಾ ವೃತ್ತಿಯಲ್ಲಿ ಒಂದು ಹೊಸ ಅಧ್ಯಾಯ ಆಗಲಿದೆ ಎಂದು ಪ್ರವೀಣ್ ನಂಬಿದ್ದಾರೆ. 'ಇದೊಂದು ಸವಾಲಿನ ಪಾತ್ರ. ಕಥೆ ಬಹಳ ಇಷ್ಟವಾಯಿತು' ಎನ್ನುತ್ತಾರೆ ಅವರು. ಪ್ರವೀಣ್ಗೆ ನಾಯಕಿಯಾಗಿ ರಾದ್ಯಾ ದೇಸಾಯಿ ಕಾಣಿಸಿಕೊಳ್ಳುತ್ತಿದ್ದಾರೆ. ಮಿಕ್ಕಂತೆ ಮೈಸೂರು ಮೂಲದ ರಾದ್ಯಾ ನಾಯಕಿಯಾಗಿ ನಟಿಸುತ್ತಿದ್ದು, ಚಿತ್ಕಲಾ ಬಿರಾದಾರ್, ಮಧುಸೂದನ್ ರಾವ್, ನಟನ ಪ್ರಶಾಂತ್, ವೀರೇಂದ್ರ, ಹರಿಣಿ ಮುಂತಾದವರು ಚಿತ್ರದಲ್ಲಿ ನಟಿಸುತ್ತಿದ್ದಾರೆ.