prathyartha movie review: ಕುತೂಹಲ, ರೋಚಕತೆ ಜತೆಗೆ ಸಿದ್ಧ ಮಾದರಿ ಪ್ರೇಮಕಥೆ

prathyartha
Published on

ಚಿತ್ರ: ಪ್ರತ್ಯರ್ಥ

ನಿರ್ದೇಶನ:ಅರ್ಜುನ್ ಕಾಮತ್

ತಾರಾಗಣ: ಅಕ್ಷಯ್ ಕಾರ್ಕಳ, ರಾಮನಾಥ್ ಶಾನುಭೋಗ್, ಶ್ರುತಿ ಚಂದ್ರಶೇಖರ್, ಸುಮನ್, ನವೀನ್ ಡಿ.ಪಡೀಲ್, ರಮೇಶ್ ಭಟ್ ಮತ್ತಿತರರು.

ಶಿವ ಸ್ಥಾವರಮಠ

ನಾವು ಒಳ್ಳೆಯದು ಮಾಡಿದರೆ, ಮುಂದೆ ನಮಗೂ ಒಳ್ಳೆಯದೇ ಆಗುತ್ತದೆ. ಅಕಸ್ಮಾತ್ ಕೆಡುಕು ಬಯಸಿದರೆ, ಅದೇ ನಮಗೆ ತಿರುಗಿ ಪರಿಣಾಮ ಬೀರಬಹುದು ಎಂಬುದನ್ನು ಒಂದು ಪ್ರೇಮಕಥೆಯಲ್ಲಿ ಸಸ್ಪೆನ್ಸ್- ಥ್ರಿಲ್ಲರ್ ಸೇರಿಸಿ ‘ಪ್ರತ್ಯರ್ಥ’ ಮೂಲಕ ಹೇಳಿದ್ದಾರೆ ನಿರ್ದೇಶಕ ಅರ್ಜುನ್ ಕಾಮತ್.

ಎಂಜಿನಿಯರಿಂಗ್ ಓದಲು ಬರುವ ಹುಡುಗ ಆಯುಷ್ (ರಾಮನಾಥ್) ಓದಿನ ನಡುವೆ ಸೀನಿಯರ್ ಪ್ರಿಯಾ (ಶ್ರುತಿ) ಪ್ರೀತಿಯ ಬಲೆಗೆ ಬೀಳುತ್ತಾನೆ. ಆಕೆ ಪ್ರಭಾವಿ ಮಾಜಿ ಸಚಿವ ಶಶಿಕಾಂತ್ (ಸುಮನ್) ಮಗಳು. ಈ ವಿಷಯ ಮಾಜಿ ಸಚಿವನಿಗೆ ತಿಳಿಯುತ್ತದೆ. ಆದರೆ, ಈ ನಡುವೆ ಆಯುಷ್ ಕಾಣೆಯಾಗುತ್ತಾನೆ. ಆತನನ್ನು ಹುಡುಕಲು ಪೊಲೀಸ್ ಅಧಿಕಾರಿ (ಅಕ್ಷಯ್) ನೇಮಕವಾಗುತ್ತಾರೆ. ಆಗ ಈ ಕೇಸ್ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತದೆ. ಸರಳ ಪ್ರೇಮಕಥೆಯೊಂದು ಆಯುಷ್ ಹುಡುಕಾಟದ ನಡುವೆ ಕುತೂಹಲ, ರೋಚಕ ಮಟ್ಟಕ್ಕೆ ತಲುಪುತ್ತದೆ. ಈ ತಿರುವಿಗೆ ಮುಖ್ಯ ಕಾರಣವೇನು ಎಂಬುದೇ ‘ಪ್ರತ್ಯರ್ಥ’ ಚಿತ್ರದ ಮುಂದಿನ ಕಥೆ.

ನಿರ್ದೇಶಕ ಅರ್ಜುನ್ ಕಾಮತ್ ಒಂದೇ ಸಿನಿಮಾದಲ್ಲಿ ವಿವಿಧ ಅಂಶಗಳನ್ನು ತೋರಿಸಲು ಯತ್ನಿಸಿದ್ದಾರೆ. ಕಾಲೇಜು ಜೀವನ, ತುಂಟಾಟ, ಪ್ರೀತಿ-ಪ್ರೇಮ, ತ್ಯಾಗ ಜತೆಗೆ ಕೊಲೆಯತ್ನ, ದ್ವೇಷ ಹೀಗೆ ಒಂದೇ ಕಥೆಯಲ್ಲಿ ನಾನಾ ವಿಚಾರಗಳನ್ನು ಸೇರಿಸಿದ್ದಾರೆ. ಮೊದಲಿಗೆ ಅಪಘಾತದ ಮೂಲಕ ಆರಂಭವಾಗುವ ಕಥೆಯು, ಅದರ ತನಿಖೆಯೊಂದಿಗೆ ಒಂದೊಂದಾಗಿ ತೆರೆದುಕೊಳ್ಳುತ್ತದೆ. ಮೊದಲರ್ಧ ಕಾಲೇಜಿನ ದೃಶ್ಯ, ಲವ್‌ಸ್ಟೋರಿ ಸಿದ್ಧ ಮಾದರಿ ಎನಿಸುತ್ತದೆ. ಬಳಿಕ ತೆರೆದುಕೊಳ್ಳುವ ಕಥೆಯು ರೋಚಕತೆಯೊಂದಿಗೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ಅಕ್ಷಯ್ ಕಾರ್ಕಳ ಪೊಲೀಸ್ ಗತ್ತಿನಲ್ಲಿ ಮಿಂಚಿದ್ದಾರೆ. ಇನ್ನು ರಾಮನಾಥ ಶಾನುಭೋಗ ಮತ್ತಷ್ಟು ಮಾಗಬೇಕಿದೆ. ಶ್ರುತಿ ಚಂದ್ರಶೇಖರ್ ಅಭಿನಯ ಇಷ್ಟವಾಗುತ್ತದೆ. ಸುಮನ್, ನವೀನ್ ಡಿ.ಪಡೀಲ್, ದೀಪಕ್ ರೈ ಪಾಣಾಜೆ ಪಾತ್ರಗಳು ಚಿತ್ರದ ಹೈಲೈಟ್. ಗೌತಮ್ ಸುನಾದ್ ಹಿನ್ನಲೆ ಸಂಗೀತ, ವಿನುತ್ ಕೆ. ಛಾಯಾಗ್ರಹಣ ಸಿನಿಮಾ ನೋಡಿಸಿಕೊಳ್ಳುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net