

ಮನುರಂಜನ್ ರವಿಚಂದ್ರನ್ ಅಭಿನಯದ ಮೂರನೆಯ ಚಿತ್ರ ‘ಪ್ರಾರಂಭ’ ಬಿಡುಗಡೆಯ ಹಂತಕ್ಕೆ ಬಂದಿದೆ. ಅದಕ್ಕೂ ಮುನ್ನ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಹಾಡುಗಳನ್ನು ಬಿಡುಗಡೆ ಮಾಡಿದವರು ರವಿಚಂದ್ರನ್.
‘ಮನೆಯಿಂದ ಹೊರಟಾಗಲೇ ನನ್ನ ಹೆಂಡತಿ ಸರಿಯಾಗಿ ಮಾತನಾಡಿ ಎಂದಿದ್ದಾಳೆ. ಏಕೆಂದರೆ, ಇದು ನನ್ನ ಮಗನ ಚಿತ್ರ. ಈ ಹಿಂದೆ ಟೀಸರ್ ನೋಡಿದ್ದೆ. ಚಿತ್ರದಲ್ಲಿ ಪ್ರೀತಿ ಇದೆ. ಹಾಗೆಯೇ ನೋವು ಸಹ ಇದೆ. ಪ್ರೀತಿಯಲ್ಲಿ ನೋವಿದ್ದರೆ ಮಾತ್ರ ಅದಕ್ಕೊಂದು ಬೆಲೆ’ ಎಂದರು. ಇನ್ನು ತಮ್ಮ ಮಗನ ಬಗ್ಗೆ ಮಾತನಾಡಿದ ಅವರು, ‘ನನ್ನ ಮಗ ನನಗಿಂತಲೂ ಚೆನ್ನಾಗಿ ಕಿಸ್ ಮಾಡುತ್ತಾನೆ, ಸಿಗರೇಟ್ ಸೇದುತ್ತಾನೆ ಎಂಬುದು ಈ ಟೀಸರ್ ಮೂಲಕ ಗೊತ್ತಾಯಿತು’ ಎಂದರು ರವಿಚಂದ್ರನ್. ‘ಇನ್ನು ಈಶ್ವರಿ ಪ್ರೊಡಕ್ಷನ್ಗೆ 50 ವರ್ಷ ತುಂಬಿದೆ. ಈ ಹೊತ್ತಿನಲ್ಲಿ ನನ್ನ ಮಕ್ಕಳು ಇಬ್ಬರೂ ನಾಯಕರಾಗಿ ಚಿತ್ರರಂಗದಲ್ಲಿದ್ದಾರೆ. ಒಬ್ಬ ತಂದೆಗೆ ಇದಕ್ಕಿಂತಲೂ ಖುಷಿ ಬೇರೆ ಏನಿದೆ?. ‘ಪ್ರಾರಂಭ’ ಚಿತ್ರದಿಂದ ಎಲ್ಲರಿಗೂ ಒಳ್ಳೆಯದಾಗಲಿ. ಚಿತ್ರ ಚೆನ್ನಾಗಿ ಓಡಲಿ’ ಎಂದು ಹಾರೈಸಿದರು.
ನಂತರ ಮಾತನಾಡಿದ ಮನು, ‘ಸಾಮಾನ್ಯವಾಗಿ ಅಪ್ಪ ಇದ್ದರೆ ಮಾತನಾಡಲು ಆಗುವುದಿಲ್ಲ. ನನಗೆ ಇಲ್ಲಿಯೂ ಅದೇ ಆಗುತ್ತಿದೆ. ‘ಪ್ರಾರಂಭ’ ಒಳ್ಳೆಯ ಕಥೆ ಇರುವ ಸಿನಿಮಾ. ಇದಕ್ಕೂ ಅರ್ಜುನ್ ರೆಡ್ಡಿಗೂ ಯಾವುದೇ ಸಂಬಂಧವಿಲ್ಲ. ಲವ್ ಫೇಲ್ಯೂರ್ ಆದ ಮೇಲೂ ಬದುಕು ನಡೆದುಕೊಂಡು ಹೋಗುತ್ತದೆ ಎಂಬುದೇ ಕಥೆ’ ಎಂದರು ಮನುರಂಜನ್. ನಿರ್ದೇಶಕ ಮನು ಕಲ್ಯಾಡಿ ಸಹ ಮಾತನಾಡಿ, ‘ಒಳ್ಳೆಯ ಚಿತ್ರ ಮಾಡಿದ್ದೇವೆ. ಪ್ರತಿಯೊಬ್ಬ ಮನುಷ್ಯನಿಗೂ, ಬದುಕು ನಿಂತುಹೋಗುತ್ತದೆ ಎನ್ನುವಾಗ ಹೊಸದೊಂದು ಲೋಕ ತೆರೆದುಕೊಳ್ಳುತ್ತದೆ. ಅಂತಹ ಒಂದು ಕಥೆ ‘ಪ್ರಾರಂಭ’ದಲ್ಲಿದೆ. ಮನುರಂಜನ್ ಅವರು ಮೂರು ಶೇಡ್ನಲ್ಲಿ ಕಾಣಿಸಿಕೊಂಡಿದ್ದಾರೆ’ ಎಂದಷ್ಟೇ ಹೇಳಿದರು.
ಮನು ಸಹೋದರ ವಿಕ್ರಮ್ ಸಹ ಮಾತನಾಡಿ, ‘ನಿರ್ದೇಶಕರು ಈ ಹೊತ್ತಿಗೆ ಸೂಟ್ ಆಗುವಂತಹ ಕಥೆಯನ್ನು ಬರೆದುಕೊಂಡಿದ್ದಾರೆ. ಆ ಕಥೆಗೆ ನಮ್ಮ ಅಣ್ಣ ಮನು ನ್ಯಾಯ ಒದಗಿಸಿದ್ದಾರೆ. ನಾನು ಪ್ರತಿಯೊಂದು ವಿಭಾಗದಲ್ಲಿಯೂ ಅವರ ಜತೆಗಿದ್ದೇನೆ. ಎಲ್ಲರಿಗೂ ಆಲ್ದಿ ಬೆಸ್ಟ್’ ಎಂದರು. ಪ್ರಜ್ವಲ್ ಪೈ ಈ ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾಗಿದ್ದಾರೆ. ಮಾರ್ಚ್ ಕೊನೆಯ ವಾರದಲ್ಲಿ ಚಿತ್ರವನ್ನು ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಮನು ಕಲ್ಯಾಡಿ ಅವರ ಸಹೋದರ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕಾರ್ಯಕ್ರಮದಲ್ಲಿ ನಟ ‘ಡಾರ್ಲಿಂಗ್’ ಕೃಷ್ಣ ಸಹ ಹಾಜರಿದ್ದರು.