

ಬೆಂಗಳೂರು: ಎಂಬತ್ತರ ದಶಕದಲ್ಲಿ ಕಾಲೇಜಿನ ಕೊನೇ ಬೆಂಚಿನ ವಿದ್ಯಾರ್ಥಿಗಳಿಗೆ, ‘ಅಲಂಕಾರ್ ವಿದ್ಯಾರ್ಥಿ’ ಎಂಬ ವಿಶೇಷ ನಾಮಪದದಿಂದ ಶಿಕ್ಷಕರು ಕರೆಯುತ್ತಿದ್ದರಂತೆ. ಇದೀಗ ಅದೇ ಹೆಸರಿನ ಚಿತ್ರದಲ್ಲಿ ನಟಿಸುತ್ತಿದ್ದಾರೆ ಪ್ರಮೋದ್. ಶೀರ್ಷಿಕೆ ಮೂಲಕವೇ ಕುತೂಹಲ ಮೂಡಿಸಿರುವ ಈ ಸಿನಿಮಾ ನಿರ್ದೇಶಿಸುತ್ತಿರುವುದು ಕೇಶವ್ ಎಸ್. ಇಂಡಲವಾಡಿ. ಹಿರಿಯ ನಿರ್ದೇಶಕ ಭಗವಾನ್ ಅವರಿಂದ ನಿರ್ದೇಶನದ ತರಬೇತಿ ಪಡೆದು, ಸಿಂಪಲ್ ಸುನಿ ಅವರ ‘ಆಪರೇಷನ್ ಅಲಮೇಲಮ್ಮ’ ಸಿನಿಮಾದಲ್ಲಿಯೂ ಕೆಲಸ ಮಾಡಿ, ಇದೀಗ ಪೂರ್ಣ ಪ್ರಮಾಣದ ನಿರ್ದೇಶಕರಾಗಿದ್ದಾರೆ.
ಈ ಚಿತ್ರದಲ್ಲಿ ಪ್ರಮೋದ್ ನಾಯಕನಾಗಿ ಕಾಣಿಸಿಕೊಂಡರೆ ಅವರಿಗೆ ಅರ್ಚನಾ ಕೊಟ್ಟಿಗೆ ಜೋಡಿಯಾಗಿದ್ದಾರೆ. ಸಂಪೂರ್ಣ ಹಾಸ್ಯಮಯವಾಗಿ ಸಾಗುವ ಈ ಚಿತ್ರದಲ್ಲಿ ಕಾಲೇಜಿನ ಕಲರ್ಫುಲ್ ಕಥೆಗಳೂ ಇರಲಿವೆಯಂತೆ. ‘‘ರತ್ನನ್ ಪ್ರಪಂಚ’ ಸಿನಿಮಾ ಬಳಿಕ ಮಾಸ್ ಶೈಲಿಯ ಸಿನಿಮಾಗಳೇ ಬರುತ್ತಿವೆ. ಅದೆಲ್ಲದರ ನಡುವೆ ಈ ಚಿತ್ರದ ಕಥೆ ಇಷ್ಟವಾಯ್ತು. ವರ್ಷದ ಹಿಂದೇ ಈ ಕಥೆ ಕೇಳಿದ್ದೆ. ತುಂಬ ಇಷ್ಟಪಟ್ಟು ಈ ಸಿನಿಮಾ ಒಪ್ಪಿದ್ದೇನೆ’ ಎನ್ನುತ್ತಾರೆ ಪ್ರಮೋದ್.
‘ನಾನು ನಿಜ ಜೀವನದಲ್ಲಂತೂ ರ್ಯಾಂಕ್ ವಿದ್ಯಾರ್ಥಿ ಆಗಲಿಲ್ಲ. ಈ ಸಿನಿಮಾ ಮೂಲಕ ಆ ಆಸೆ ಈಡೇರಿಸಿಕೊಳ್ಳುತ್ತಿದ್ದೇನೆ’ ಎಂದರು ನಾಯಕಿ ಅರ್ಚನಾ ಕೊಟ್ಟಿಗೆ. ರಘು ದೀಕ್ಷಿತ್ ಸಂಗೀತ ನೀಡಲಿದ್ದಾರೆ. ರೋಹಿತ್ ಗೌಡ, ಯೋಗೇಶ್, ಶ್ರೀನಿವಾಸ್, ಮಧು ಆರಾಧ್ಯ ಚಿತ್ರ ನಿರ್ವಿುಸುತ್ತಿದ್ದಾರೆ. ಇತ್ತೀಚೆಗೆ ನಟ ಧನಂಜಯ ಈ ಚಿತ್ರದ ಮುಹೂರ್ತಕ್ಕೆ ಆಗಮಿಸಿ ಶುಭಕೋರಿದರು.