

ಬೆಂಗಳೂರು: ಪೋಷಕ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಪ್ರಮೋದ್ ಶೆಟ್ಟಿ, ‘ಲಾಫಿಂಗ್ ಬುದ್ಧ’ ಚಿತ್ರದ ಮೂಲಕ ನಾಯಕನಾಗಬೇಕಿತ್ತು. ಆದರೆ, ಮಳೆಯಿಂದ ಚಿತ್ರೀಕರಣ ಮುಂದಕ್ಕೆ ಹೋಗಿದ್ದರಿಂದ, ಅದರ ಬದಲು ‘ಕಾಶಿಯಾತ್ರೆ’ ಎಂಬ ಇನ್ನೊಂದು ಚಿತ್ರ ಶುರುವಾಯ್ತು. ಈಗ ಈ ಎರಡು ಚಿತ್ರಗಳು ಮುಗಿಯುವ ಮುನ್ನವೇ ಅವರು ನಾಯಕನಾಗಿ ನಟಿಸುತ್ತಿರುವ ಮೂರನೇ ಚಿತ್ರ ಸೆಟ್ಟೇರಿದೆ.
ಹೆಸರು ‘ಶಭಾಷ್ ಬಡ್ಡಿಮಗ್ನೆ’. ವಿಜಯದಶಮಿ ಹಬ್ಬದಂದು ಚಿತ್ರ ಸೆಟ್ಟೇರಿದ್ದು, ನಟ ಅಜೇಯ್ ರಾವ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. ಕೆಲವು ಚಿತ್ರಗಳಲ್ಲಿ ಸಹಾಯಕ ನಿದೇಶಕನಾಗಿ ಕೆಲಸ ಮಾಡಿರುವ ಸಾ.ರಾ. ಹರೀಶ್ ಚೊಚ್ಚಲ ನಿರ್ದೇಶನದ ಚಿತ್ರವಿದು. ‘ಶಭಾಷ್ ಬಡ್ಡಿಮಗ್ನೆ’ ಶೀರ್ಷಿಕೆಗೆ, ‘ಅಂತ ಬಾಯ್ತುಂಬಾ ಹೊಗಳೋದಾ? ಇಲ್ಲಾ ತೆಗಳೋದಾ?’ ಎಂಬ ಅಡಿಬರಹವಿದೆ.
1980ರ ದಶಕದಲ್ಲಿ ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ನಡೆದ ನೈಜ ಘಟನೆಯಿಂದ ಸ್ಪೂರ್ತಿ ಪಡೆದು ಚಿತ್ರಕಥೆ ಬರೆಯಲಾಗಿದೆ. ಅದೇ ಭಾಗದಲ್ಲಿ 45 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಕಾಮಿಡಿ, ಮರ್ಡರ್ ಮಿಸ್ಟರಿ, ಥ್ರಿಲ್ಲರ್ ಹೀಗೆ ಹಲವು ಅಂಶಗಳಿರುವ ಈ ಚಿತ್ರದಲ್ಲಿ ಫೈಟ್ಗಳು ಇರುವುದಿಲ್ಲ. ತರಲೆ ಮಾಡುವ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ, ಅವರ ಪತ್ನಿ ಪಾತ್ರದಲ್ಲಿ ನಾಯಕಿಯಾಗಿ ಪ್ರಿಯಾ ನಟಿಸುತ್ತಿದ್ದು, ರಂಗಾಯಣ ರಘು, ರಾಹುಲ್, ರವಿತೇಜ ತಾರಾಗಣದಲ್ಲಿದ್ದಾರೆ.