ರೊಮ್ಯಾಂಟಿಕ್ ಹೀರೋ ಆದ ಪ್ರಮೋದ್​ ಶೆಟ್ಟಿ ; ಶಭಾಷ್​ ಬಡ್ಡಿಮಗ್ನೆ ಚಿತ್ರದಲ್ಲಿ ಆದ್ಯಪ್ರಿಯಾ ಜತೆ ರೊಮ್ಯಾನ್ಸ್​​

zx
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ಪೋಷಕ ಪಾತ್ರಗಳು, ಕಾಮಿಡಿ ರೋಲ್​ಗಳಿಂದ, ಖಡಕ್​ ವಿಲನ್​ ಕ್ಯಾರಕ್ಟರ್​ಗಳಲ್ಲೂ ನಟಿಸಿರುವ ಪ್ರಮೋದ್​ ಶೆಟ್ಟಿ "ಒಂದು ಶಿಕಾರಿಯ ಕಥೆ', "ಲಾಫಿಂಗ್​ ಬುದ್ಧ' ಚಿತ್ರಗಳಲ್ಲಿ ನಾಯಕನಾಗಿಯೂ ಮಿಂಚಿದ್ದಾರೆ. ಇದೀಗ ಬಿ.ಎಸ್​. ರಾಜಶೇಖರ್​ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್​&ಕಟ್​ ಹೇಳುತ್ತಿರುವ "ಶಭಾಷ್​ ಬಡ್ಡಿಮಗ್ನೆ' ಚಿತ್ರದಲ್ಲಿ ಮೊದಲ ಬಾರಿಗೆ ರೊಮ್ಯಾಂಟಿಕ್​ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರದ "ನೀನಾಗೆ ನೀ ಶುರುಮಾಡು...', "ಬಾರೆ ಬಾರೆ ಜಿಂಕೆಮರಿ' ಹಾಡುಗಳು ರಿಲೀಸ್​ ಆಗಿದ್ದು, ಇತ್ತೀಚೆಗಷ್ಟೆ ಟ್ರೇಲರ್​ ಬಿಡುಗಡೆ ಮಾಡಲಾಗಿದೆ.

ಪ್ರಮೋದ್​ಗೆ ಆದ್ಯಪ್ರಿಯಾ ನಾಯಕಿಯಾಗಿದ್ದು, ಸಾಮ್ರಾಟ್​ ಶೆಟ್ಟಿ, ಕಾವ್ಯ ಪ್ರಕಾಶ್​, ರವಿತೇಜ, ಮಿತ್ರ, ಮೂಗು ಸುರೇಶ್​, ಶಂಕರ್​ ಅಶ್ವತ್ಥ್​, ಪ್ರಕಾಶ್​ ತುಮ್ಮಿನಾಡು ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರದ ಬಗ್ಗೆ ನಿರ್ದೇಶಕ ರಾಜಶೇಖರ್​, "ಪರಿಚಿತರೊಬ್ಬರು ಹೇಳಿದ 90ರ ದಶಕದಲ್ಲಿ ನಡೆದ ನೈಜ ಟನೆಯ ಎಳೆಯನ್ನು ಇಲ್ಲಿ ಸಿನಿಮಾ ರೂಪ ನೀಡಿದ್ದೇನೆ. ಅಂದಿನ ಕಾಲಟ್ಟಕ್ಕೆ ತಕ್ಕಂತ ಸ್ಥಳಗಳು, ಕಾಸ್ಟ್ಯೂಮ್​ಗಳನ್ನು ಬಳಸಿದ್ದೇವೆ. ಸೋಮಾರಿ ಪೊಲೀಸ್​ ಅಧಿಕಾರಿಯ ಕಥೆಯಿದು. ಕೆಲಸಕ್ಕಿಂತ ಹೆಚ್ಚಾಗಿ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಆಸಕ್ತಿ ತೋರುವ ಆತನ ಠಾಣಾ ವ್ಯಾಪ್ತಿಯಲ್ಲಿ ಕೊಲೆಯೊಂದು ನಡೆಯುತ್ತದೆ. ಅದನ್ನು ಆತ ಹೇಗೆ ತನಿಖೆ ಮಾಡುತ್ತಾನೆ? ಎಂಬುದನ್ನು ಕಾಮಿಡಿ ಮೂಲಕ ನಿರೂಪಿಸಿದ್ದೇವೆ' ಎಂದು ಮಾಹಿತಿ ನೀಡುತ್ತಾರೆ.

ನಾಯಕ ಪ್ರಮೋದ್​ ಶೆಟ್ಟಿ, "ಸಿನಿಮಾದಲ್ಲಿ ಕಾಮಿಡಿ, ರೊಮ್ಯಾನ್ಸ್​, ಆ್ಯಕ್ಷನ್​ ಎಲ್ಲವೂ ಇರುವುದರಿಂದ ಬೋರ್​ ಅನ್ನಿಸುವುದಿಲ್ಲ. ಇಲ್ಲಿಯವರೆಗೆ ಭ್ರಷ್ಟ, ಮುಗ್ಧ, ಖಳ ಪೊಲೀಸ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಇದೀಗ ಈ ಚಿತ್ರದಲ್ಲಿ ಸೋಮಾರಿ ಪೊಲೀಸ್​ ಆಗಿದ್ದೇನೆ. ಪ್ರಾರಂಭದಿಂದ ಕೊನೆಯವರೆಗೂ ಉಸಿರಾಡಲೂ ಬಿಡದೇ ನಗಿಸುವ ಚಿತ್ರವಿದು' ಎಂದರು. ಇದೇ ತಿಂಗಳಂತ್ಯದಲ್ಲಿ "ಶಭಾಷ್​ ಬಡ್ಡಿಮಗ್ನೆ' ತೆರೆಗೆ ಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net