

ರಂಗಭೂಮಿ ಹಿನ್ನೆಲೆಯಿಂದ ಬಂದು ಈಗಲೂ ಆ ನಂಟಿನಿಂದ ಬಿಡಿಸಿಕೊಳ್ಳಲಾಗದೆ, ಅಲ್ಲೂ ಸೈ, ಸಿನಿಮಾಕ್ಕೂ ಜೈ ಎನ್ನುತ್ತಿದ್ದಾರೆ ನಟ ಪ್ರಮೋದ್ ಶೆಟ್ಟಿ. ಪೋಷಕ ಪಾತ್ರಗಳ ಮೂಲಕವೇ ಗುರುತಿಸಿಕೊಂಡು, ಸದ್ಯ ನಾಯಕನ ಸ್ಥಾನಕ್ಕೆ ಬಂದು ನಿಂತಿದ್ದಾರೆ. ಅವರ ಆ ಪಯಣವೇ ಒಂದು ರೀತಿ ಮಜವಾಗಿದೆ. ಅದನ್ನು ‘ಸಿನಿವಾಣಿ’ ಜತೆ ಅವರು ಮೆಲುಕುಹಾಕಿದ್ದಾರೆ. ಹಾಗೇ ಅದೆಲ್ಲವನ್ನೂ ಅವಲೋಕಿಸಲು ಅವಕಾಶ ಮಾಡಿಕೊಟ್ಟಿದ್ದು ಅವರು ಪ್ರಧಾನ ಪಾತ್ರದಲ್ಲಿ ನಟಿಸಿರುವ ‘ಒಂದು ಶಿಕಾರಿಯ ಕಥೆ’ ಸಿನಿಮಾ. ಈ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಬೆಂಗಳೂರು: ‘ಶೆಟ್ರೆ ... ನಮ್ ಸಿನಿಮಾದಲ್ಲಿ ನಟಿಸ್ತೀರಾ? ‘ಆವತ್ತು ಎಂದಿನಂತೆ ನಾನು ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದೆ. ನಾನು ಮತ್ತು ರಿಷಬ್ ಕಾಲೇಜು ಸ್ನೇಹಿತರಾಗಿದ್ದರಿಂದ, ಯಾವುದಾದರೂ ನಾಟಕದಲ್ಲಿ ನಟಿಸುತ್ತಿದ್ದರೆ, ಅದನ್ನು ರಿಷಬ್ ಗಮನಕ್ಕೆ ತರಲೇಬೇಕಿತ್ತು. ನನ್ನ ನಾಟಕ ಇರುವ ಬಗ್ಗೆ ಅಪ್ಡೇಟ್ ಮಾಡಿದೆ. ನಾಟಕ ನೋಡಲು ರಕ್ಷಿತ್ ಶೆಟ್ಟಿ ಅವರನ್ನೂ ರಿಷಬ್ ಕರೆತಂದಿದ್ದ. ನಾಟಕ ನೋಡಿ, ‘ಶೆಟ್ರೆ, ಒಂದು ಸಿನಿಮಾ ಇದೆ. ಅದರಲ್ಲಿ ನೀವು ಒಂದು ಪಾತ್ರ ಮಾಡಲೇಬೇಕು ...’ ಎಂದು ರಕ್ಷಿತ್ ಹೇಳಿದರು. ಮೊದಲಿಗೆ ಇಲ್ಲ ಅಂದೆ. ಕ್ಯಾಮರಾಗೂ ನನಗೂ ನಂಟು ಕಡಿಮೆ ಎಂದು ರಿಜೆಕ್ಟ್ ಮಾಡಿದೆ. ಆಗ ರಿಷಬ್ ಬೈದು ಬುದ್ಧಿ ಹೇಳಿ, ನಟಿಸಲು ಒಪ್ಪಿಸಿದ. ಅಲ್ಲಿಂದ ನನ್ನ ಸಿನಿಮಾ ಜರ್ನಿ ಶುರುವಾಯ್ತು ...’ ಹೀಗೆ ಸಿನಿಮಾಕ್ಕೆ ಪದಾರ್ಪಣೆ ಮಾಡಿದ ಕಥೆಯನ್ನು ಹೇಳಿಕೊಂಡವರು ನಟ ಪ್ರಮೋದ್ ಶೆಟ್ಟಿ. 2014ರಲ್ಲಿ ‘ಉಳಿದವರು ಕಂಡಂತೆ’ ಸಿನಿಮಾದಲ್ಲಿ ನಟಿಸಿದ್ದ ಪ್ರಮೋದ್, ಅವರ ಸಿನಿಮಾ ಗ್ರಾಫ್ ಕೇವಲ ಆರೇ ವರ್ಷದಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ಇಲ್ಲಿಯವರೆಗೂ 28ಕ್ಕೂ ಅಧಿಕ ಸಿನಿಮಾಗಳಲ್ಲಿ ಪ್ರಮೋದ್ ನಟಿಸಿದ್ದಾರೆ, ನಟಿಸುತ್ತಿದ್ದಾರೆ. ‘ಆವತ್ತು ರಿಜೆಕ್ಟ್ ಮಾಡಿದ್ದರೆ, ಈವತ್ತು ಇಷ್ಟೆಲ್ಲ ಘಟಿಸುತ್ತಿರಲಿಲ್ಲ’ ಎನ್ನುವ ಪ್ರಮೋದ್, ಆ ಕಥೆಯನ್ನೂ ಹೇಳಿಕೊಳ್ಳುತ್ತಾರೆ. ‘ಸಿನಿಮಾ ಅಂದರೆ ಅದೊಂದು ಉಡಾಫೆ ಲೋಕ. ಬದ್ಧತೆ ಇರಲ್ಲ ಎಂಬ ನಂಬಿಕೆ ನನಗಿತ್ತು. ಆದರೆ, ನಾಟಕದಲ್ಲಿ ನನಗೇ ಅಂತ ಒಂದು ಜವಾಬ್ದಾರಿ ಇತ್ತು. ಹೀಗಿರುವಾಗಲೇ, ‘ಉಳಿದವರು ಕಂಡಂತೆ’ ಸಿನಿಮಾದಲ್ಲಿ ತೊಡಗಿಸಿಕೊಂಡ ಮೇಲೆ ಅಸಲಿ ಕಥೆ ಗೊತ್ತಾಯ್ತು. ಒಂದು ದೃಶ್ಯಕ್ಕಾಗಿ ಪಡುವ ಕಷ್ಟ ಕಣ್ಣಿಗೆ ಕಾಣಿಸಿತು. 20 ದಿನ
ಕಾಲ್ಶೀಟ್ ಕೊಟ್ಟಿದ್ದೆ. ಕೊನೆಗೆ ಸಿನಿಮಾ ಮೇಲಿನ ಪ್ರೀತಿ ಹೆಚ್ಚಾಗಿ, ಸಿನಿಮಾ ಕೊನೆಯವರೆಗೂ ತಂಡದ ಜತೆಗಿದ್ದೆ. ಆರ್ಟ್ ವಿಭಾಗ, ಪ್ರೊಡಕ್ಷನ್ ಸೆಕ್ಷನ್ ಎಲ್ಲ ಕಡೆ ಕೆಲಸ ಮಾಡಿದೆ. ಡ್ರೖೆವರ್ ಆಗಿಯೂ ಒಂದಷ್ಟು ದಿನ ತಂಡದಲ್ಲಿದ್ದೆ. ಈಗ ಅದೆಲ್ಲವನ್ನೂ ಹಿಂತಿರುಗಿ ನೋಡಿದರೆ ಅದ್ಭುತ ಪಯಣ ಕಣ್ಣ ಮುಂದೆ ಕಾಣುತ್ತದೆ’ ಎನ್ನುತ್ತಾರೆ ಪ್ರಮೋದ್.
ಒಳ್ಳೆಯದು ಆಯ್ತು ಅನ್ನುವಷ್ಟರಲ್ಲಿ ...
‘ಉಳಿದವರು ಕಂಡಂತೆ’ ಸಿನಿಮಾದಿಂದ ಪ್ರಮೋದ್ ಶೆಟ್ಟಿ ಚಂದನವನಕ್ಕೆ ಕಾಲಿಟ್ಟರು. ಅದಾದ ಬಳಿಕ ‘ರಿಕ್ಕಿ’ ಮೂಲಕ ಮತ್ತೊಂದು ಪ್ರಯೋಗ ಅವರಿಂದಾಯ್ತು. ಮುಂದೆ? ಸುದೀರ್ಘ ಎರಡು ವರ್ಷ ಖಾಲಿ! ಅತ್ತ ಧಾರಾವಾಹಿಯತ್ತ ಹೋಗಲೂ ಆಗದೆ, ಸಿನಿಮಾ ಅವಕಾಶವೂ ಇಲ್ಲದೆ ಅತಂತ್ರಕ್ಕೆ ಸಿಲುಕಿದರು ಪ್ರಮೋದ್. ‘ಸಿನಿಮಾಕ್ಕೆ ಬರುವುದಕ್ಕೂ ಮುನ್ನ ನಾಟಕರಂಗದಲ್ಲಿದ್ದೆ. ಸೀರಿಯಲ್ ಕ್ಷೇತ್ರ ಹೊಟ್ಟೆ ತುಂಬಿಸುತ್ತಿತ್ತು. ಸಿನಿಮಾ ಅವಕಾಶ ಸಿಗುತ್ತಿದ್ದಂತೆ, ಧಾರಾವಾಹಿ ಕೈಬಿಟ್ಟೆ. ದುಡ್ಡಿನ ಸಮಸ್ಯೆ ಇಲ್ಲದಿದ್ದರೂ, ಕೈಯಲ್ಲಿ ಕೆಲಸ ಇರಲಿಲ್ಲ. ನನಗೆ ನಾನೇ ಮೋಟಿವೇಟ್ ಮಾಡಿಕೊಳ್ಳಲಾರಂಭಿಸಿದೆ. ಬಳಿಕ ಎರಡು ವರ್ಷ ಸಿನಿಮಾಗಳೇ ಸಿಗಲಿಲ್ಲ. ಅದಾದ ಬಳಿಕ ಎರಡರಷ್ಟು ಸಿಕ್ಕಿತು’ ಎಂದು ಅಂದಿನ ಪರಿಸ್ಥಿತಿಯನ್ನು ನೆನಪಿಸಿಕೊಳ್ಳುತ್ತಾರೆ ಪ್ರಮೋದ್. ‘ಕಿಚ್ಚ’ ಸುದೀಪ್ ಹೇಳಿದ ಒಂದು ಮಾತು ಇನ್ನೂ ಅವರಿಗೆ ನೆನಪಿದೆಯಂತೆ. ‘ರಕ್ಷಿತ್ ಜತೆಗೆ ‘ರಿಕ್ಕಿ’ ಸಿನಿಮಾ ಮಾಡಿದ್ದೆ. ಅದರಲ್ಲಿನ ನನ್ನ ಧ್ವನಿ ಕೇಳಿ ಸುದೀಪ್ ಒಂದು ಹೇಳಿಕೆ ನೀಡಿದ್ದರು. ‘ನನಗೆ ಕನ್ನಡ ಇಂಡಸ್ಟ್ರಿಯಲ್ಲಿ ರವಿಶಂಕರ್ ಧ್ವನಿ ಬಿಟ್ಟು, ನನ್ನ ಧ್ವನಿ ಮಾತ್ರ ಇಷ್ಟ. ನನಗೆ ಸ್ಪರ್ಧೆವೊಡ್ಡಲು ಒಂದು ಧ್ವನಿ ಬರ್ತಾ ಇದೆ. ಅದು ಪ್ರಮೋದ್ ಶೆಟ್ಟಿ ಧ್ವನಿ. ಇನ್ನು ಮುಂದೆ ನಾನು ಹುಷಾರಾಗಿರಬೇಕಪ್ಪಾ ...’ ಎಂದು ಸ್ಟೇಟ್ವೆುಂಟ್ ಕೊಟ್ಟರು. ಆ ಒಂದು ಹೇಳಿಕೆ ನನ್ನನ್ನು ಮತ್ತಷ್ಟು ಬೂಸ್ಟ್ ಮಾಡಿತು’ ಎಂದು ಆ ದಿನಗಳತ್ತ ಹೊರಳುತ್ತಾರೆ ಪ್ರಮೋದ್.
‘ಒಂದು ಶಿಕಾರಿ ಕಥೆ’ ಸಿನಿಮಾದ ಪ್ರಧಾನ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ನಟಿಸಿದ್ದಾರೆ. ಅವರದ್ದಿಲ್ಲಿ ಲೇಖಕನ ಪಾತ್ರ. ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ನಡೆಯುವ ಕಥೆ ಆದ್ದರಿಂದ ಭಾಷೆ ಮತ್ತು ಮೇಕಿಂಗ್ನಲ್ಲಿ ಅಲ್ಲಿನ ಸೊಗಡು ಕಾಣಿಸಲಿದೆ. ಆ ಪ್ರಾಂತ್ಯದಲ್ಲಿಯೇ ಇಡೀ ಸಿನಿಮಾ ತೆರೆದುಕೊಳ್ಳುತ್ತದೆ. ‘ನಾಯಕ ಎಂಬುದಕ್ಕಿಂತ ಮುಖ್ಯಪಾತ್ರ ನನ್ನದು. ಕಥಾನಾಯಕ ಒಬ್ಬ ನಾವೆಲಿಸ್ಟ್. ತನ್ನ ಆತ್ಮಚರಿತ್ರೆ ಬರೆಯಲು ಶುರುಮಾಡಿದಾಗ, ತನ್ನ ಜೀವನದಲ್ಲಿ ಏನೆಲ್ಲ ಮಾಡಿಲ್ಲ ಎಂಬುದನ್ನು ಅವಲೋಕಿಸುತ್ತಾನೆ. ಸೂಕ್ಷ್ಮ ಸ್ವಭಾವದ ಆತ ಒಂದು ಸಣ್ಣ ಜೀವಿಗೂ ಹಿಂಸೆ ನೀಡುವವನಲ್ಲ. ಆದರೆ, ಅವನ ತಂದೆ ತನ್ನಂತೆ ತನ್ನ ಮಗನೂ ಬೇಟೇಗಾರ ಆಗಬೇಕೆಂದು ಆಸೆ ಇಟ್ಟುಕೊಂಡಿರುತ್ತಾನೆ. ಅಪ್ಪನ ಆಸೆ ಈಡೇರಿಸಲು ಗನ್ ಹಿಡಿದು ಶಿಕಾರಿಗಿಳಿಯುತ್ತಾನೆ. ಆಗ ಘಟಿಸುವ ಅವಾಂತರಗಳೇ ಸಿನಿಮಾದ ಜೀವಾಳ’ ಎನ್ನುವ ಪ್ರಮೋದ್, ಈ ಚಿತ್ರವನ್ನು ಸಸ್ಪೆನ್ಸ್ ಥ್ರಿಲ್ಲರ್ ಶೈಲಿಗೆ ಹೋಲಿಸುತ್ತಾರೆ.
ಲೇಖನಿ ಹಿಡಿದ ಕೈಗೆ ಗನ್ ಬಂತು ...
‘ಒಂದು ಶಿಕಾರಿ ಕಥೆ’ ಸಿನಿಮಾದ ಪ್ರಧಾನ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ನಟಿಸಿದ್ದಾರೆ. ಅವರದ್ದಿಲ್ಲಿ ಲೇಖಕನ ಪಾತ್ರ. ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ನಡೆಯುವ ಕಥೆ ಆದ್ದರಿಂದ ಭಾಷೆ ಮತ್ತು ಮೇಕಿಂಗ್ನಲ್ಲಿ ಅಲ್ಲಿನ ಸೊಗಡು ಕಾಣಿಸಲಿದೆ. ಆ ಪ್ರಾಂತ್ಯದಲ್ಲಿಯೇ ಇಡೀ ಸಿನಿಮಾ ತೆರೆದುಕೊಳ್ಳುತ್ತದೆ. ‘ನಾಯಕ ಎಂಬುದಕ್ಕಿಂತ ಮುಖ್ಯಪಾತ್ರ ನನ್ನದು. ಕಥಾನಾಯಕ ಒಬ್ಬ ನಾವೆಲಿಸ್ಟ್. ತನ್ನ ಆತ್ಮಚರಿತ್ರೆ ಬರೆಯಲು ಶುರುಮಾಡಿದಾಗ, ತನ್ನ ಜೀವನದಲ್ಲಿ ಏನೆಲ್ಲ ಮಾಡಿಲ್ಲ ಎಂಬುದನ್ನು ಅವಲೋಕಿಸುತ್ತಾನೆ. ಸೂಕ್ಷ್ಮ ಸ್ವಭಾವದ ಆತ ಒಂದು ಸಣ್ಣ ಜೀವಿಗೂ ಹಿಂಸೆ ನೀಡುವವನಲ್ಲ. ಆದರೆ, ಅವನ ತಂದೆ ತನ್ನಂತೆ ತನ್ನ ಮಗನೂ ಬೇಟೇಗಾರ ಆಗಬೇಕೆಂದು ಆಸೆ ಇಟ್ಟುಕೊಂಡಿರುತ್ತಾನೆ. ಅಪ್ಪನ ಆಸೆ ಈಡೇರಿಸಲು ಗನ್ ಹಿಡಿದು ಶಿಕಾರಿಗಿಳಿಯುತ್ತಾನೆ. ಆಗ ಘಟಿಸುವ ಅವಾಂತರಗಳೇ ಸಿನಿಮಾದ ಜೀವಾಳ’ ಎನ್ನುವ ಪ್ರಮೋದ್, ಈ ಚಿತ್ರವನ್ನು ಸಸ್ಪೆನ್ಸ್ ಥ್ರಿಲ್ಲರ್ ಶೈಲಿಗೆ ಹೋಲಿಸುತ್ತಾರೆ.
ಪಾತ್ರಗಳ ಹುಡುಕಾಟದಲ್ಲಿದ್ದೇನೆ...
‘ನಾನು ಆಕ್ಸಿಡೆಂಟಲಿ ಸಿನಿಮಾಕ್ಕೆ ಬಂದವನು. ರಂಗಭೂಮಿಗೆ ನನ್ನ ಮೊದಲ ಪ್ರಾಶಸ್ಱ. ಅಲ್ಲಿನ ನನ್ನ ನಟನೆ ನೋಡಿ ಚಪ್ಪಾಳೆ ತಟ್ಟುತ್ತಿದ್ದರು. ಕಲಾ ವಿಭಾಗ, ಲೈಟಿಂಗ್ ಸೇರಿ ಎಲ್ಲರದರಲ್ಲೂ ನಾನು ಪಾಲುದಾರನಿರುತ್ತಿದ್ದೆ. ದಿನಗಳೆದಂತೆ ಅದು ಸಿನಿಮಾಕ್ಕೂ ಹಬ್ಬಿತು. ಎಲ್ಲೇ ಹೋದರೂ ನಾನು ಪರಿಪೂರ್ಣ ನಟನಾಗಿಯೇ ಗುರುತಿಸಿಕೊಳ್ಳಬೇಕೆಂದುಕೊಂಡು ಬಂದವನು. ನಟನಾಗಿ ಏನು ಪ್ರಶಂಸೆ ಸಿಗುತ್ತದೆಯೋ ಅದೇ ಬೇಕು. ಹೊಸ ಪಾತ್ರಗಳನ್ನು ಹುಡುಕುತ್ತಿರುತ್ತೇನೆ. ನನ್ನ ಇಲ್ಲಿಯವರೆಗಿನ ಸಿನಿಮಾಗಳನ್ನು ನೋಡಿದರೆ ಅದಕ್ಕೆ ಸಾಕ್ಷಿ ಸಿಗುತ್ತದೆ. ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’, ‘ಅವನೇ ಶ್ರಿಮನ್ನಾರಾಯಣ’, ಹೊಸಬರ ‘ತೂತು ಮಡಿಕೆ’ ಇನ್ನೂ ಹತ್ತಾರು ಪಾತ್ರಗಳು ನನಗೆ ಅಚ್ಚುಮೆಚ್ಚು’ ಎಂದು ಪಾತ್ರ ಪೋಷಣೆ ಬಗ್ಗೆ ಹೇಳಿಕೊಳ್ಳುವ ಪ್ರಮೋದ್, ಈಗಲೂ ತಮ್ಮದೇ ಆದ ರಂಗಭೂಮಿ ತಂಡವನ್ನು ಕಟ್ಟಿಕೊಂಡಿದ್ದಾರೆ.
ಮಂಜು ಕೊಟಗುಣಸಿ