ಮಗನಿಗೆ ಖಾಕಿ ತೊಡಿಸಿ 'ಸಿಂಗಂ' ನೆನಪಿಸಿಕೊಂಡ ಪ್ರಕಾಶ್​ ರೈ

Prakash Rai Final
Published on

ಲಾಕ್​ಡೌನ್​ ಸಂದರ್ಭದಲ್ಲಿ ಸಾಕಷ್ಟು ಜನರಿಗೆ ತಮ್ಮದೇ ರೀತಿಯಲ್ಲಿ ಸಹಾಯ ಮಾಡಿದ ಕಲಾವಿದರಲ್ಲಿ ಪ್ರಕಾಶ್​ ರೈ ಸಹ ಒಬ್ಬರು. ಅಗತ್ಯವಿರವವರಿಗೆ ದಿನಸಿ ವಿತರಿಸುವುದು ಜತೆಗೆ, ಸಾಕಷ್ಟು ಜನರಿಗೆ ಹಣಕಾಸಿನ ನೆರವನ್ನೂ ನೀಡಿದ್ದರು.

ಲಾಕ್​ಡೌನ್​ ಘೋಷಣೆಯಾದಾಗಿನಿಂದಲೂ ತಮ್ಮ ಫಾರ್ಮ್​ ಹೌಸ್​ನಲ್ಲಿ ಬೀಡುಬಿಟ್ಟಿರುವ ಪ್ರಕಾಶ್​ ರೈ, ತಮ್ಮ ಕುಟುಂಬದವರ ಜತೆಗೆ ಅಲ್ಲೇ ಸಮಯ ಕಳೆಯುತ್ತಿದ್ದಾರೆ. ಈ ಮಧ್ಯೆ, 'ಸಿಂಗಂ'ವು ಯಶಸ್ವಿಯಾಗಿ ಒಂಬತ್ತು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಅವರು ತಮ್ಮ ಮಗನಿಗೆ ಪೊಲೀಸ್​ ಯೂನಿಫಾರ್ಮ್​ ತೊಡಿಸಿ, ಫೋಟೋಗೆ ಜತೆಯಾಗಿದ್ದಾರೆ.

ಅಜಯ್​ ದೇವಗನ್​ ಅಭಿನಯದ ಹಿಂದಿಯ 'ಸಿಂಗಂ' ಬಿಡುಗಡೆಯಾಗಿ ಇಂದಿಗೆ ಒಂಬತ್ತು ವರ್ಷಗಳಾಗಿವೆ. ರೋಹಿತ್​ ಶೆಟ್ಟಿ ನಿರ್ದೇಶನದ ಆ ಚಿತ್ರದಲ್ಲಿ ಪ್ರಕಾಶ್​ ರೈ, ಜಯಕಾಂತ್​ ಶಿಕ್ರೆ ಎಂಬ ನೆಗೆಟಿವ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಪಾತ್ರ ಸಾಕಷ್ಟು ಯಶಸ್ವಿಯಾಗಿತ್ತು.

ಅದಕ್ಕೂ ಮುನ್ನವೇ, 'ವಾಂಟೆಡ್​' ಚಿತ್ರದಲ್ಲಿ ಪ್ರಕಾಶ್​ ರೈ ನಟಿಸಿದ್ದರೂ, 'ಸಿಂಗಂ' ಚಿತ್ರವು ಪ್ರಕಾಶ್​ ರೈ ಅವರಿಗೆ ದೊಡ್ಡ ಜನಪ್ರಿಯತೆ ತಂದುಕೊಟ್ಟಿತ್ತು. ಈ ಚಿತ್ರಕ್ಕೆ ಒಂಬತ್ತು ವರ್ಷ ತುಂಬಿದ ಹಿನ್ನೆಲೆಯಲ್ಲಿ ಅವರು ತಮ್ಮ ಮಗನಿಗೆ ಪೊಲೀಸ್​ ಯೂನಿಫಾರ್ಮ್​ ಹಾಕಿಸಿ, ಫೋಟೋ ತೆಗೆಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಈ ಪಾತ್ರವನ್ನು ಅವಿಸ್ಮರಣೀಯ ಮಾಡಿದ ಚಿತ್ರತಂಡ ಮತ್ತು ಸಿನಿಮಾ ವೀಕ್ಷಕರಿಗೆ ಅವರು ಧನ್ಯವಾದವನ್ನೂ ತಿಳಿಸಿದ್ದಾರೆ.

ಹಾಗೆ ನೋಡಿದರೆ, ತಮಿಳಿನ 'ಸಿಂಗಂ' ಚಿತ್ರದಲ್ಲೂ ಅವರು ನೆಗೆಟಿವ್​ ಪಾತ್ರವನ್ನೇ ಮಾಡಿದರು. ಆ ಚಿತ್ರ ಹಿಂದಿಗೆ ರೀಮೇಕ್​ ಆದಾಗ, ಆ ಪಾತ್ರದಲ್ಲೇ ಅವರು ಮುಂದುವರೆದರು. ಮೂಲ ಚಿತ್ರಕ್ಕಿಂತ ಈ ಕಥೆಯಲ್ಲಿ ಸಾಕಷ್ಟು ಬದಲಾವಣೆಗಳಿದ್ದವು ಮತ್ತು ಪ್ರಕಾಶ್​ ಅವರ ಜಯಕಾಂತ್​ ಶಿಕ್ರೆ ಪಾತ್ರಕ್ಕೆ ಇನ್ನೂ ಹೆಚ್ಚಿನ ಸ್ಕೋಪ್​ ಇತ್ತು. ಅದನ್ನು ಅದ್ಭುತವಾಗಿ ಬಳಸಿಕೊಂಡಿದ್ದ ಪ್ರಕಾಶ್​ ರೈ, ತಮ್ಮ ಅಭಿನಯದಿಂದ ಎಲ್ಲರಿಗೂ ಇಷ್ಟವಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net