

ನವದೆಹಲಿ: ಮಾಜಿ ರಾಷ್ಟ್ರಪತಿ ದಿವಂಗತ ಎಪಿಜೆ ಅಬ್ದುಲ್ ಕಲಾಂ ಅವರ ಬಯೋಪಿಕ್ನ ಫಸ್ಟ್ ಲುಕ್ ಪೋಸ್ಟರನ್ನು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಭಾನುವಾರ ಬಿಡುಗಡೆ ಮಾಡಿದರು.
ಎಪಿಜೆ ಅಬ್ದುಲ್ ಕಲಾಂ: ದ ಮಿಸೈಲ್ ಮ್ಯಾನ್ ಎಂಬುದು ಸಿನಿಮಾದ ಹೆಸರು. ಈ ಸಿನಿಮಾ ಈ ವರ್ಷ ಕೊನೆಯ ಭಾಗದಲ್ಲಿ ತೆರೆ ಕಾಣಲಿದ್ದು, ಹಾಲಿವುಡ್ ಮತ್ತು ತೆಲುಗು ಸಿನಿಮಾ ಇಂಡಸ್ಟ್ರಿ ಸೇರಿ ಇದನ್ನು ನಿರ್ಮಿಸುತ್ತಿವೆ.
ಸಚಿವ ಜಾವಡೇಕರ್ ತನ್ನ ಟ್ವಿಟರ್ನಲ್ಲಿ ಇದಕ್ಕೆ ಸಂಬಂಧಿಸಿದ ಫೋಟೋವನ್ನು ಹಂಚಿಕೊಂಡಿದ್ದು, ನವದೆಹಲಿಯಲ್ಲಿ ಪೋಸ್ಟರ್ ಬಿಡುಗಡೆ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.
ದಕ್ಷಿಣ ಭಾರತದ ಜನಪ್ರಿಯ ನಟ ಅಲಿ ಇದರಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಜಗದೀಶ್ ದಾನೇಟಿ, ಸುವರ್ಣ ಪಪ್ಪು, ಮಾರ್ಟಿನಿ ಫಿಲಮ್ಸ್ ಇದನ್ನು ನಿರ್ಮಿಸುತ್ತಿದ್ದಾರೆ. ಅಮೆರಿಕ ಮೂಲದ ಮಾರ್ಟಿನಿ ಫಿಲಮ್ಸ್, ಪಿಂಕ್ ಜಾಗ್ವಾರ್ ಎಂಟರ್ಟೇನ್ಮೆಂಟ್ ಮತ್ತು ಇತರೆ ಕೆಲವು ಸಹನಿರ್ಮಾಪಕರು ಸೇರಿ ಛತ್ರಪತಿ ಶಿವಾಜಿ ಮಹಾರಾಜ್, ಫಸ್ಟ್ ವಾರ್ ಆಫ್ ಇಂಡಿಯನ್ ಇಂಡಿಪೆಂಡೆನ್ಸ್ ಸೇರಿ ಭಾರತದಲ್ಲಿ 5 ಪ್ರಾಡಕ್ಷನ್ಗಳ ಮೂಲಕ 100 ಕೋಟಿ ಡಾಲರ್ಗೂ ಅಧಿಕ ಹಣವನ್ನು ಹೂಡಿಕೆ ಮಾಡುತ್ತಿದೆ ಎಂದು ಸಚಿವ ಜಾವಡೇಕರ್ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಅಲಿ, ಸಿನಿಮಾ ನಿರ್ಮಾಪಕ ಮಧುರ್ ಭಂಡಾರ್ಕರ್, ಮಾರ್ಟಿನ್ ಮತ್ತು ಇತರರು ಹಾಜರಿದ್ದರು.