'ಅಂಬಿ ನಿಂಗೆ ವಯಸ್ಸಾಯ್ತೋ' ನಂತರ ಪ್ರಜ್ವಲ್​ ಜತೆಗೆ ಗುರುದತ್​

Prajwal - Gurudutt
Published on

ಬೆಂಗಳೂರು: 'ರೆಬೆಲ್​ ಸ್ಟಾರ್​' ಅಂಬರೀಶ್​ ಅಭಿನಯದ ಕೊನೆಯ ಚಿತ್ರ 'ಅಂಬಿ ನಿಂಗೆ ವಯಸ್ಸಾಯ್ತೋ' ನಿರ್ದೇಶನ ಮಾಡಿದ್ದ ಗುರುದತ್​ ಗಾಣಿಗ, ಆ ನಂತರ ಅಭಿಷೇಕ್​ ಅಂಬರೀಶ್​ ಅಭಿನಯದ ಹೊಸ ಚಿತ್ರವೊಂದನ್ನು ನಿರ್ದೇಶಿಸುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ, ಕಾರಣಾಂತರಗಳಿಂದ ಆ ಚಿತ್ರ ಸೆಟ್ಟೇರಿರಲಿಲ್ಲ.

ಈಗ ಗುರುದತ್​ ಹೊಸ ಚಿತ್ರವೊಂದನ್ನು ನಿರ್ದೇಶಿಸುವುದಕ್ಕೆ ಸಜ್ಜಾಗಿದ್ದಾರೆ. ಈ ಬಾರಿ ಪ್ರಜ್ವಲ್​ ಅಭಿನಯದ ಚಿತ್ರವೊಂದನ್ನು ಗುರುದತ್​ ನಿರ್ದೇಶಿಸುತ್ತಿದ್ದು, 2021ರ ಜನವರಿ ಮೊದಲ ವಾರದಲ್ಲಿ ಚಿತ್ರದ ಮೊದಲ ಲುಕ್​ ಬಿಡುಗಡೆಯಾಗಲಿದೆ.

ಪ್ರಜ್ವಲ್​ ಚಿತ್ರಜೀವನದಲ್ಲೇ ಇದೊಂದು ವಿಭಿನ್ನ ಚಿತ್ರವಾಗಲಿದೆ ಎನ್ನುವ ಗುರುದತ್​, ಮಾನವ ಕಳ್ಳಸಾಗಾಣಿಕೆ ಕುರಿತಾಗಿ ಈ ಚಿತ್ರ ಮಾಡುವುದಕ್ಕೆ ಹೊರಟಿದ್ದಾರೆ. ಇದೊಂದು ಆಕ್ಷನ್​ ಥ್ರಿಲ್ಲರ್​ ಎಂದು ಹೇಳಬಯಸುವ ಅವರು, ಈ ಚಿತ್ರದಲ್ಲಿ ಪ್ರಜ್ವಲ್​ ಅವರನ್ನು ವಿಭಿನ್ನ ತೋರಿಸುವುದಕ್ಕೆ ಹೊರಟಿದ್ದಾರಂತೆ.

'ಪ್ರಜ್ವಲ್​ ಪಾಲಿಗೆ ಇದೊಂದು ವಿಭಿನ್ನ ಸಿನಿಮಾ. ಇದುವರೆಗೂ ಮಾಡದಿರುವ ಒಂದು ಪಾತ್ರವನ್ನು ಅವರು ಮಾಡುತ್ತಿದ್ದಾರೆ. ಸದ್ಯದಲ್ಲೇ ಅವರ ಫೋಟೋಶೂಟ್​ ನಡೆಯಲಿದ್ದು, ಜನವರಿ ಮೊದಲ ವಾರದಲ್ಲಿ ಚಿತ್ರದ ಫಸ್ಟ್​ ಲುಕ್​ ಬಿಡುಗಡೆ ಮಾಡುವ ಯೋಚನೆ ಇದೆ. ಸದ್ಯಕ್ಕೆ ಚಿತ್ರದ ಕಲಾವಿದರ ಆಯ್ಕೆ ನಡೆಯುತ್ತಿದೆ' ಎನ್ನುತ್ತಾರೆ ಗುರುದತ್​.

ಈ ಚಿತ್ರವನ್ನು ಬೆಂಗಳೂರು ಕುಮಾರ್​ ನಿರ್ಮಿಸುತ್ತಿದ್ದಾರೆ. 'ಮುಂದಿನ ನಿಲ್ದಾಣ' ಚಿತ್ರಕ್ಕೆ ಛಾಯಾಗ್ರಹಣ ಮಾಡಿದ ಅಭಿಮನ್ಯು ಸದಾನಂದನ್​ ಛಾಯಾಗ್ರಹಣ ಮಾಡಿದರೆ, ಅಜನೀಶ್​ ಲೋಕನಾಥ್​ ಸಂಗೀತ ಸಂಯೋಜಿಸುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net