

ಮುಂಬೈ: ಪ್ರಭಾಸ್ ಅಭಿನಯದ ‘ಆದಿಪುರುಷ್’ ಚಿತ್ರದ ಚಿತ್ರೀಕರಣ ಪ್ರಾರಂಭವಾಗುವುದು ಮುಂದಿನ ವರ್ಷವೇ ಆದರೂ, ಈಗಾಗಲೇ ತೆರೆಮರೆಯಲ್ಲಿ ಕೆಲಸಗಳು ಪ್ರಾರಂಭವಾಗಿದೆ. ಪಾತ್ರವರ್ಗದ ಆಯ್ಕೆ ಪ್ರಕ್ರಿಯೂ ಅಂತಿಮ ಹಂತದಲ್ಲಿದ್ದು, ಇನ್ನೇನು ಆ ಮಾಹಿತಿಯನ್ನೂ ಶೀಘ್ರದಲ್ಲಿ ಹೇಳಿಕೊಳ್ಳಲಿದೆ ತಂಡ. ಇದೀಗ ಸಿನಿಮಾ ಸೆಟ್ಟೇರುವ ಮುನ್ನವೇ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿಕೊಂಡಿದೆ.
ಹೌದು, ಜನವರಿಯಿಂದ ಸಿನಿಮಾ ಶೂಟಿಂಗ್ ಆರಂಭವಾಗಲಿದೆ. ಡಿಸೆಂಬರ್ ಒಳಗೆ ಚಿತ್ರೀಕರಣ ಮುಗಿಸಿಕೊಂಡು, 2022ರ ಆಗಸ್ಟ್ 11ರಂದು ಸಿನಿಮಾ ಬಿಡುಗಡೆ ಆಗಲಿದೆಯೆಂದು ಚಿತ್ರತಂಡವೇ ಅಧಿಕೃತ ಪೋಸ್ಟರ್ ಬಿಡುಗಡೆ ಮಾಡಿದೆ. ಶೂಟಿಂಗ್ನಲ್ಲಿ ಅತಿ ಹೆಚ್ಚಿನ ಪ್ರಮಾಣದ ಗ್ರಾಫಿಕ್ಸ್ ಇರಲಿದ್ದು, ಅದಕ್ಕಾಗಿಯೇ ಹೆಚ್ಚಿನ ಸಮಯವನ್ನು ತಂಡ ಮೀಸಲಿಡಬೇಕಿದೆ. ಚಿತ್ರದ ಒಟ್ಟಾರೆ ಬಜೆಟ್ನಲ್ಲಿ ಅರ್ಧದಷ್ಟು ದುಡ್ಡನ್ನು ಬರೀ ವಿಎಫ್ಎಕ್ಸ್ಗೆ ಮೀಸಲಿಡಲಾಗುತ್ತಿದ್ದು, ಈ ಚಿತ್ರ ಯಾವ ಮಟ್ಟಿಗೆ ಮೂಡಿಬರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ.
ಮೂಲಗಳ ಪ್ರಕಾರ, ಚಿತ್ರ ಹಾಲಿವುಡ್ ರೇಂಜ್ನಲ್ಲಿ ಸಿನಿಮಾ ಮೂಡಿಬರಬೇಕು ಎನ್ನುವ ನಿಟ್ಟಿನಲ್ಲಿ ನಿರ್ದೇಶಕ ಓಂ ರೌತ್, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ವಿಎಫ್ಎಕ್ಸ್ ತಂತ್ರಜ್ಱರನ್ನು ಈ ಚಿತ್ರಕ್ಕೆ ಕರೆಸುತ್ತಿದ್ದಾರಂತೆ. ಪ್ರಮುಖವಾಗಿ ‘ಗೇಮ್ ಆಫ್ ಥ್ರೋನ್ಸ್’ಗೆ ಕೆಲಸ ಮಾಡಿದ್ದ ತಂತ್ರಜ್ಱರಿಂದ ಈ ಕೆಲಸ ಮಾಡಿಸಲಾಗುತ್ತದಂತೆ.
‘ಆದಿಪುರುಷ್’ ಚಿತ್ರವು ರಾಮಾಯಣವನ್ನಾಧರಿಸಿದ್ದು, ಈ ಚಿತ್ರವನ್ನು ಟಿ-ಸೀರೀಸ್ನ ಭೂಷಣ್ ಕುಮಾರ್ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಪ್ರಭಾಸ್ ಅವರು ರಾಮನ ಪಾತ್ರವನ್ನು ಮಾಡಿದರೆ, ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರಕ್ಕೆ ಕೃತಿ ಸನೂನ್ ನಾಯಕಿ ಎಂದು ಹೇಳಲಾಗಿತ್ತಾದರೂ, ಅದಿನ್ನು ಅಧಿಕೃತವಾಗಿಲ್ಲ. ಇದೀಗ ಬಿಡುಗಡೆ ದಿನಾಂಕವನ್ನೂ ಘೋಷಿಸಿಕೊಂಡಿದೆ. (ಏಜೆನ್ಸೀಸ್)