

ಬೆಂಗಳೂರು: ಕನ್ನಡದಲ್ಲಿ ಸದ್ಯಕ್ಕೆ ಮೂರ್ನಾಲ್ಕು ಚಿತ್ರಗಳನ್ನು ಒಪ್ಪಿಕೊಂಡಿರುವ ರಚಿತಾ ರಾಮ್ , 'ಲಿಲ್ಲಿ' ಎಂಬ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಈ ವರ್ಷದ ಆರಂಭದಲ್ಲೇ ಆಗಿತ್ತು. ಆದರೆ, ಆ ಚಿತ್ರದ ವಿಶೇಷತೆ ಏನು ಎಂಬ ವಿಷಯವನ್ನು ಚಿತ್ರತಂಡದವರು ಹೇಳಿಕೊಂಡಿರಲಿಲ್ಲ.
ಇನ್ನೇನು, ಚಿತ್ರ ಶುರುವಾಗಬೇಕು ಎನ್ನುವಷ್ಟರಲ್ಲಿ ಲಾಕ್ಡೌನ್ ಘೋಷಣೆಯಾಗಿದ್ದರಿಂದ ಚಿತ್ರೀಕರಣ ಮುಂದೂಡಲಾಗಿತ್ತು. ಸದ್ಯ ರಚಿತಾ ಒಂದೆರೆಡು ಚಿತ್ರಗಳಲ್ಲಿ ನಟಿಸುತ್ತಿರುವುದರಿಂದ, ಅವೆಲ್ಲಾ ಮುಗಿಸಿ, 'ಲಿಲ್ಲಿ' ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಈ ಮಧ್ಯೆ, ರಚಿತಾ ಹುಟ್ಟುಹಬ್ಬದ ಅಂಗವಾಗಿ, ಚಿತ್ರತಂಡದವರು ಮೊದಲ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
'ಲಿಲ್ಲಿ' ಚಿತ್ರದ ಪೋಸ್ಟರ್ಗಳನ್ನು ನೋಡುತ್ತಿದ್ದರೆ, ಇದೊಂದು ಪಕ್ಕಾ ಸೈನ್ಸ್ ಫಿಕ್ಷನ್ ಚಿತ್ರ ಇರಬಹುದು ಎಂದನಿಸುತ್ತದೆ. ಆದರೆ, ಚಿತ್ರತಂಡದವರು ಮಾತ್ರ ಇದುವರೆಗೂ, ಕಥೆ ಏನಿರಬಹುದು ಮತ್ತು ಇದರಲ್ಲಿ ರಚಿತಾ ಅವರ ಪಾತ್ರ ಏನಾಗಿರಬಹುದು ಎಂಬ ರಹಸ್ಯವನ್ನು ಎಲ್ಲೂ ಬಿಟ್ಟುಕೊಟ್ಟಿಲ್ಲ.
'ಲಿಲ್ಲಿ' ಚಿತ್ರವನ್ನು ವಿಜಯ್ ಗೌಡ ಎನ್ನುವವರು ನಿರ್ದೇಶನ ಮಾಡುತ್ತಿದ್ದು, ನಾಗರಾಜ್ ಮತ್ತು ಎಸ್. ಸುಬ್ರಮಣಿ ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ. 'ರಂಗಿತರಂಗ' ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದ ವಿಲಿಯಂ ಡೇವಿಡ್, ಈ ಚಿತ್ರಕ್ಕೂ ಛಾಯಾಗ್ರಹಣ ಮಾಡಲಿದ್ದಾರೆ. ಇನ್ನು ವೀರೀಶ್ ಗೌಡ ಎನ್ನುವವರು ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ.