ಕನಸಲ್ಲೂ ಬರುತ್ತಿವೆ ಪಾಪ್​ಕಾರ್ನ್ ಸೀನ್ಸ್

popkarn feb 19 2020
Published on

ಬೆಂಗಳೂರು: ನನ್ನ ಕನಸಿನಲ್ಲಿಯೂ ‘ಪಾಪ್​ಕಾರ್ನ್ ಮಂಕಿ ಟೈಗರ್’ ಸಿನಿಮಾ ಸೀನ್​ಗಳೇ ಬರುತ್ತಿರುತ್ತವೆ. ಸೂರಿ ಅವರ ಸಿನಿಮಾದಲ್ಲಿ ನಟಿಸುವುದು ಎಂದರೆ ಒಂದು ಅಕಾಡೆಮಿಯಲ್ಲಿ ಕಲಿತ ಹಾಗೆ ಎಂದು ಹೇಳುತ್ತಾರೆ ಅಮೃತಾ ಅಯ್ಯಂಗಾರ್.

ಇದೇ ಶುಕ್ರವಾರ ರಿಲೀಸ್ ಆಗುತ್ತಿರುವ ‘ಪಾಪ್​ಕಾರ್ನ್ ಮಂಕಿ ಟೈಗರ್’ ಚಿತ್ರದಲ್ಲಿ ನಾಯಕಿಯಾಗಿರುವ ಅಮೃತಾ ತಮ್ಮ ಪಾತ್ರದ ಬಗ್ಗೆ ಹೇಳಿದ್ದಾರೆ. ‘ಈ ಚಿತ್ರದಲ್ಲಿ ಸುಮಿತ್ರಾ ಎಂಬ ಮಧ್ಯಮವರ್ಗದ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಜೀವನದ ಬಗ್ಗೆ ಬಹಳ ಭಯ ಇರುವಂತಹವಳು. ಜತೆಗೆ ತುಂಬಾ ಎಮೋಷನಲ್ ಕೂಡ.

ನಾನು ಎಷ್ಟೇ ಸಿನಿಮಾದಲ್ಲಿ ನಟಿಸಿದರೂ ಅದನ್ನು ಪಾಪ್​ಕಾರ್ನ್​ಗೆ ಮ್ಯಾಚ್ ಮಾಡಲು ಸಾಧ್ಯವಿಲ್ಲ. ಅಂಥ ಒಂದು ಅದ್ಭುತ ಅನುಭವವನ್ನು ಈ ಚಿತ್ರದಲ್ಲಿ ಪಡೆದುಕೊಂಡಿದ್ದೇನೆ’ ಎನ್ನುತ್ತಾರೆ ಅಮೃತಾ. ‘ಪ್ರತಿಯೊಂದು ಸೀನ್, ಪ್ರತಿ ಫ್ರೇಮ್ ಕೂಡ ಒಂದು ಹೊಸ ಅನುಭವ ನೀಡಿದೆ. ಸೂರಿ ಅವರ ನಿರ್ದೇಶನದಲ್ಲಿ ಕೆಲಸ ಮಾಡುವಾಗ ಪ್ರತಿ ದಿನ, ಪ್ರತಿ ಕ್ಷಣ ಹೊಸದನ್ನು ಕಲಿಯುತ್ತೇವೆ. ನಾನು ಬೇರೆ ಚಿತ್ರಗಳಲ್ಲಿ ನಟಿಸಿದ್ದಕ್ಕೂ ಇದರಲ್ಲಿ ನಟಿಸಿದ್ದಕ್ಕೂ ಬಹಳ ವ್ಯತ್ಯಾಸವಿದೆ. ಇನ್ನು ನಾನು ‘ಟಗರು’ ನೋಡಿದ ಮೇಲೆ ಧನಂಜಯ ಅವರಿಗೆ ಫ್ಯಾನ್ ಆಗಿದ್ದೆ. ಆ ಚಿತ್ರದಲ್ಲಿ ಅವರ ಕಣ್ಣನ್ನು ನೋಡಿ ಇವರನ್ನು ಹೇಗೆ ಫೇಸ್ ಮಾಡುವುದು ಎಂದುಕೊಂಡಿದ್ದೆ. ಆದರೆ ಅವರ ಜತೆ ನಟಿಸಲು ಆರಂಭಿಸಿದ ಮೇಲೆ ಆ ಅಭಿಪ್ರಾಯ ಬದಲಾಯಿತು’ ಎನ್ನುತ್ತಾರೆ ಅಮೃತಾ. ‘ಶುಕ್ರವಾರ ಚಿತ್ರ ರಿಲೀಸ್ ಆಗುತ್ತಿದೆ, ಜನ ಹೇಗೆ ರಿಸಿವ್ ಮಾಡುತ್ತಾರೋ ಎಂಬ ಭಯ ಇದೆ. ಈ ಎರಡು ದಿನವನ್ನು ನಾನು ಗಂಟೆಗಳ ಲೆಕ್ಕದಲ್ಲಿ ಕಳೆಯುತ್ತಿದ್ದೇನೆ. ಸಿನಿಮಾ ಖಂಡಿತ ಎಲ್ಲರಿಗೂ ಇಷ್ಟವಾಗುತ್ತದೆ’ ಎಂದು ಹೇಳಿ ತಮ್ಮ ಮಾತನ್ನು ಮುಗಿಸುತ್ತಾರೆ.

ಬೆಳಗ್ಗೆ 7ರ ಪ್ರದರ್ಶನದಲ್ಲಿ ಚಿತ್ರತಂಡ

‘ಪಾಪ್​ಕಾರ್ನ್ ಮಂಕಿ ಟೈಗರ್’ ಚಿತ್ರದ ಅಬ್ಬರ ಎಷ್ಟಿದೆ ಎಂದರೆ ಫೆ. 21ರ ಬೆಳಗ್ಗೆ 7ಕ್ಕೆ ಬೆಂಗಳೂರಿನ ಜೆ.ಪಿ. ನಗರದ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಪ್ರದರ್ಶನ ಇದೆ. ಇದಕ್ಕೆ ನಟ ಧನಂಜಯ, ಅಮೃತಾ, ನಿವೇದಿತಾ, ಸಪ್ತಮಿ ಸೇರಿ ಇಡೀ ಚಿತ್ರತಂಡ ಹಾಜರಾಗಲಿದೆ. ಈಗಾಗಲೇ ಬುಕ್ಕಿಂಗ್ ಆರಂಭವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net