

ಸಿನಿಮಾ ಮೇಕಿಂಗ್ಗೆ ಹೊಸ ರೀತೀಯ ವ್ಯಾಖ್ಯಾನ ನೀಡುವುದು ನಿರ್ದೇಶಕ ಸೂರಿಗೆ ಹೊಸದಲ್ಲ. ಈ ಹಿಂದೆ ಸ್ಟಾರ್ಗಳನ್ನು ಇಟ್ಟುಕೊಂಡು ಹೊಸ ರೀತಿಯ ಪ್ರಯೋಗಗಳನ್ನು ‘ಅಟೆಂಪ್ಟ್’ ಮಾಡಿ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ‘ಟಗರು’ ಚಿತ್ರದಲ್ಲಿ ನಾನ್ ಲೀನಿಯರ್ ಸ್ಕ್ರೀನ್ಪ್ಲೇನಲ್ಲಿ ಸಿನಿಮಾ ತೋರಿಸಿ ಯಶಸ್ವಿಯಾಗಿದ್ದ ಸೂರಿ, ಈ ಬಾರಿ ‘ಪಾಪ್ ಕಾರ್ನ್ ಮಂಕಿ ಟೈಗರ್’ ಎಂಬ ವಿಚಿತ್ರವಾದ ಟೈಟಲ್ ಇಟ್ಟುಕೊಂಡು ಅಖಾಡಕ್ಕಿಳಿದಿದ್ದಾರೆ. ಈ ಬಾರಿಯ ಪ್ರಯೋಗವನ್ನು ಪ್ರೇಕ್ಷಕ ಕೊಂಚ ಅರಗಿಸಿಕೊಳ್ಳಬೇಕಿದೆ.
ಕೆಲವು ಪುಸ್ತಕಗಳಲ್ಲಿ ಪ್ರತಿ ಪುಟದಲ್ಲಿನ, ಪ್ರತಿ ಅಕ್ಷರವೂ ಓದಲು ಬಹಳ ಚೆನ್ನಾಗಿದೆ ಎನಿಸುತ್ತದೆ. ಜತೆಗೆ ಆ ಪುಸ್ತಕ ಓದುಗನನ್ನು ಬೆಂಬಿಡದೇ ಓದಿಸಿಕೊಂಡು ಹೋಗುತ್ತದೆ, ಕಡೆಗೆ ನಾವು ಓದಿದ್ದೇನು, ಆ ಪುಸ್ತಕದ ಒಟ್ಟು ಸಾರಾಂಶವೇನು ಎಂಬುದೇ ಗೊತ್ತಾಗಿರುವುದಿಲ್ಲ್ಲ ಈ ಚಿತ್ರದಲ್ಲಿಯೂ ಸಹ ಪ್ರತಿ ಫ್ರೇಮ್ ನೋಡಿಸಿಕೊಂಡು ಹೋಗುತ್ತದೆ, ಯಾವುದೇ ದೃಶ್ಯವನ್ನು ಮಿಸ್ ಮಾಡಿಕೊಳ್ಳಬಾರದು ಎನಿಸುತ್ತದೆ, ಹೊರ ಬಂದ ಮೇಲೆ ನಾವು ನೋಡಿದ್ದೇನು, ಎಂಬುದನ್ನು ಪ್ರೇಕ್ಷಕ ತನ್ನನ್ನು ತಾನೇ ಕೇಳಿಕೊಳ್ಳಬೇಕು ಎನಿಸುತ್ತದೆ.
ಸೂರಿ ಮೇಕಿಂಗ್ ಹೇಗೆ ವಿಭಿನ್ನವೋ ಅವರು ಸೃಷ್ಟಿಸುವ ಪಾತ್ರಗಳು ಮತ್ತು ಅದಕ್ಕೆ ಅವರಿಡುವ ಹೆಸರುಗಳು ಸಹ ಚಿತ್ರ ವಿಚಿತ್ರವಾಗಿರುತ್ತವೆ. ‘ಗಲೀಜು’ ‘ಕೊತ್ತಂಬರಿ’ ‘ಮೂಗ’ ‘ಹಾವ್ ರಾಣಿ’ ‘ಶುಗರ್’ ,ಹೀಗೆ ಎಲ್ಲವೂ ನೋಡುಗನಿಗೆ ಕಿಕ್ ಕೊಡುತ್ತವೆ. ಕ್ಯಾಚಿ ಹೆಸರುಗಳನ್ನು ಇಟ್ಟು, ವಿಚಿತ್ರವಾದ ಪಾತ್ರ ಪೋಷಣೆ ಮಾಡಿಸಿ ಕೆಲ ಪಾತ್ರಗಳನ್ನು ಅಲ್ಲಲ್ಲಿಯೇ ಬಿಟ್ಟು ಬಿಡುತ್ತಾರೆ. ಇದು ಕೊಂಚ ಲಿಂಕ್ ಮಿಸ್ ಆದಂತೆ ಅನಿಸುತ್ತದೆ. ಮಾಸ್ ಪ್ರೇಕ್ಷಕರಿಗೆ ಹಬ್ಬ ಎನಿಸುವಂತಹ ಸಾಕಷ್ಟು ದೃಶ್ಯಗಳು ಚಿತ್ರದಲ್ಲಿದೆ.
ಸಿನಿಮಾದ ಮೊದಲರ್ಧ ಒಂದೇ ಓಘದಲ್ಲಿ ಓಡುವ ಸಿನಿಮಾ, ದ್ವಿತಿಯಾರ್ಧದಲ್ಲಿ ಕೊಂಚ ಎಳೆದಂತೆ ಅನಿಸುತ್ತದೆ. ಸಿನಿಮಾಟೋಗ್ರಫರ್ ಶೇಖರ್ , ಸಂಗೀತ ನಿರ್ದೇಶಕ ಚರಣ್ ರಾಜ್ ಇಬ್ಬರೂ ಸಿನಿಮಾವನ್ನು ಬೇರೆಯದ್ದೇ ಲೆವೆಲ್ಗೆ ತೆಗೆದುಕೊಂಡು ಹೋಗಿದ್ದಾರೆ.
ಡಾಲಿ ಪಾತ್ರದ ಮೂಲಕ ಧನಂಜಯ ಅವರಿಗೆ ಬೇರೆಯದ್ದೇ ಇಮೇಜ್ ಕೊಟ್ಟಿದ್ದ ಸೂರಿ, ಮಂಕಿ ಸೀನನ ಮೂಲಕ ಆತನೊಳಗಿನ ‘ನಟ ರಾಕ್ಷಸ’ನನ್ನು ಬಡಿದೆಬ್ಬಿಸಿದ್ದಾರೆ. ಈ ಹಿಂದೆ ನಟಿಸಿದ ಅಷ್ಟು ಸಿನಿಮಾಗಳನ್ನು ಜನ ಮರೆಯುವಂತೆ ನಟಿಸಿದ್ದಾರವರು. ನಿರ್ದೇಶಕರ ಪರಿಕಲ್ಪನೆಗೆ ತಮ್ಮನ್ನು ತಾವು ಅರ್ಪಿಸಿಕೊಂಡಿರುವುದು ಚಿತ್ರದ ಪ್ರತಿ ಫ್ರೇಮ್ಲ್ಲಿಯೂ ಕಾಣುತ್ತದೆ. ಈ ಹುಡುಗನನ್ನು ಇಟ್ಟುಕೊಂಡು ಎಂತಹ ಚಿತ್ರ ಬೇಕಾದರೂ ಮಾಡಬಹುದು ಎನ್ನುಷ್ಟರ ಮಟ್ಟಿಗಿದೆ ಅವರ ಪರ್ಫಾಮೆನ್ಸ್.
ನಿವೇದಿತಾ ಅವರದ್ದು ಎಂದಿನಂತೆ ಖಡಕ್ ನಟನೆ, ಕಲಾವಿದೆಗೆ ಬೇಕಾಗಿರುವುದು ಸೌಂದರ್ಯ ಅಲ್ಲ, ನಟನೆ ಎಂಬುದನ್ನು ಮತ್ತೊಮ್ಮೆ ನಿವೇದಿತಾ ತೋರಿಸಿದ್ದಾರೆ. ಸ್ಪರ್ಶ ರೇಖಾ ಹೀಗೂ ನಟಿಸುತ್ತಾರೆ ಎಂಬಂತೆ ನಟನೆ ಮಾಡಿದ್ದಾರೆ. ಸ್ಕ್ರೀನ್ ಸ್ಪೇಸ್ ಕಮ್ಮಿ ಇದ್ದರೂ, ಅಮೃತಾ ಅವರದ್ದು ಗಮನ ಸೆಳೆಯುವ ನಟನೆ. ಇಡೀ ಸಿನಿಮಾದ ಅಚ್ಚರಿ ಎಂದರೆ ಸಪ್ತಮಿ. ಮೊದಲ ಬಾರಿಗೆ ನಟಿಸಿರುವ ಅವರು, ತಮ್ಮ ಅದ್ಭುತವಾದ ಎನರ್ಜಿಯಿಂದ ಪ್ರೇಕ್ಷಕರ ಶಿಳ್ಳೆ ಗಿಟ್ಟಿಸುತ್ತಾರೆ. ಮೂಗನಾಗಿ ನಟಿಸಿರುವ ಗೌತಮ್ ಗಲೀಜು ಪಾತ್ರದಲ್ಲಿರುವ ಅಲ್ಲು, ಬಬ್ಲು ಆಗಿರುವ ಪೂರ್ಣಚಂದ್ರ, ಹೀಗೆ ಪ್ರತಿಯೊಬ್ಬರು ತಮ್ಮದೇ ಆದ ಛಾಪನ್ನು ಚಿತ್ರದಲ್ಲಿ ಮೂಡಿಸುತ್ತಾರೆ. ‘ಪಾಪ್ ಕಾರ್ನ್ ಮಂಕಿ ಟೈಗರ್’ ಕನ್ನಡಕ್ಕೆ ಹೊಸ ಮಾದರಿಯ ಮೇಕಿಂಗ್ ಇರುವ ಚಿತ್ರ. ಚಿತ್ರದಲ್ಲಿನ ರಾನೆಸ್ ತುಂಬಾ ಜಾಸ್ತಿ. ಆದರೆ ಈ ಹೊಸ ಮಾದರಿಯ ಮೇಕಿಂಗ್ನ್ನು ಜನ ಹೇಗೆ ರಿಸೀವ್ ಮಾಡುತ್ತಾರೆ ಎಂಬುದರ ಮೇಲೆ ಚಿತ್ರದ ಫಲಿತಾಂಶ ನಿಂತಿರುತ್ತದೆ.
ಚಿತ್ರ: ಪಾಪ್ ಕಾರ್ನ್ ಮಂಕಿ ಟೈಗರ್, ನಿರ್ದೇಶಕ: ಸೂರಿ, ನಿರ್ಮಾಣ: ಕೆ ಎಂ ಸುಧೀರ್, ತಾರಾಗಣ: ಧನಂಜಯ, ಅಮೃತಾ, ನಿವೇದಿತಾ, ಸಪ್ತಮಿ, ರೇಖಾ ಮತ್ತಿತರರು.
| ಹರೀಶ್ ಬಸವರಾಜ್