

ಟಾಲಿವುಡ್ ಮತ್ತು ಬಾಲಿವುಡ್ನಲ್ಲಿ ಮೋಡಿ ಮಾಡುತ್ತಿದ್ದಾರೆ ಸೌತ್ ಬೆಡಗಿ ಪೂಜಾ ಹೆಗ್ಡೆ. ಬಿಡುಗಡೆಗೆ ರೆಡಿ ಇರುವ ಸಾಲುಸಾಲು ಸಿನಿಮಾಗಳು ಒಂದೆಡೆಯಾದರೆ, ಚಿತ್ರೀಕರಣ ಆಗುತ್ತಿರುವ ಸಿನಿಮಾಗಳು ಮತ್ತೊಂದೆಡೆ. ಹೀಗೆ ಸದಾ ಬಿಜಿಯಾಗಿರುವ ಪೂಜಾ, ಎಲ್ಲ ನಿರ್ವಪಕರ ಮತ್ತು ನಾಯಕರ ಹಾಟ್ ಫೇವರಿಟ್ ನಟಿ ಎಂದರೆ ತಪ್ಪಾಗಲಾರದು. ಆದರೆ, ಕೆಲವೇ ವರ್ಷಗಳ ಹಿಂದೆ ಇದೇ ನಟಿಗೆ ‘ಐರನ್ ಲೆಗ್’ ಎಂಬ ಪಟ್ಟವನ್ನು ಚಿತ್ರರಂಗದವರು ಕಟ್ಟಿದ್ದರೆಂದರೆ ನೀವು ನಂಬಲೇಬೇಕು!
ಹೌದು, ಆರಂಭದ ವರ್ಷಗಳಲ್ಲಿ ಪೂಜಾ ನಟಿಸಿದ ನಾಲ್ಕು ಸಿನಿಮಾಗಳು ಪ್ಲಾಪ್ ಪಟ್ಟಿಗೆ ಸೇರಿದ್ದವು. ಅದೇ ಕಾರಣಕ್ಕೆ, ಪೂಜಾಗೆ ಐರನ್ ಲೆಗ್ ಎಂಬ ಹಣೆಪಟ್ಟಿಯೂ ಅಂಟಿಕೊಂಡಿತು. ಆದರೆ, ಕಾಲ ಒಂದೇ ರೀತಿ ಇರುವುದಿಲ್ಲ. ಅಲ್ಲು ಅರ್ಜುನ್ ಜತೆಗೆ ‘ದುವ್ವಾಡು ಜಗನ್ನಾಥಮ್ ಚಿತ್ರ ಹಿಟ್ ಆಗಿದ್ದೇ ತಡ, ಸಾಲುಸಾಲು ಸಿನಿಮಾಗಳು ಪೂಜಾ ಬಳಿ ಬಂದವು. ಅಲ್ಲಿಂದ ಶುರುವಾದ ಆ ಯಶಸ್ವಿ ಪ್ರಯಾಣ ಇದೀಗ ಟಾಲಿವುಡ್ನ ಟಾಪ್ ನಟಿ ಸ್ಥಾನಕ್ಕೆ ತಂದು ನಿಲ್ಲಿಸಿದೆ. ಕಳೆದ ಶುಕ್ರವಾರವಷ್ಟೇ ಪೂಜಾ ನಟನೆಯ ತೆಲುಗಿನ ‘ಮೋಸ್ಟ್ ಎಲಿಜಿಬಲ್ ಬ್ಯಾಚಲರ್’ ಸಿನಿಮಾ ಬಿಡುಗಡೆ ಆಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಲೆಕ್ಷನ್ ವಿಷಯದಲ್ಲೂ ಸಿನಿಮಾ ಮುಂದಿದೆ. ಇದೆಲ್ಲದರಿಂದ, ಪೂಜಾ ವರ್ಚಸ್ಸು ಬದಲಾಗಿದ್ದು, ‘ಐರನ್ ಲೆಗ್’ನಿಂದ ‘ಗೋಲ್ಡನ್ ಲೆಗ್’ ಎಂದು ಎಲ್ಲರೂ ಕರೆಯುವಂತಾಗಿದೆ.
ಸದ್ಯ ಪೂಜಾ ಬತ್ತಳಿಕೆಯಲ್ಲಿ ಬಹುಕೋಟಿ ವೆಚ್ಚದ ಸಿನಿಮಾಗಳೇ ಇರುವುದು ಮತ್ತೊಂದು ವಿಶೇಷ. ಇನ್ನೇನು ವರ್ಷಾಂತ್ಯಕ್ಕೆ ಹಿಂದಿಯ ‘ಸರ್ಕಸ್’, ಜನವರಿಗೆ ‘ರಾಧೆ ಶ್ಯಾಮ್ ತೆರೆಗೆ ಬರಲಿವೆ. ಈ ಚಿತ್ರಗಳು ಗೆದ್ದರೆ, ಪೂಜಾ ಇನ್ನಷ್ಟು ಗಟ್ಟಿಯಾಗಿ ನೆಲೆನಿಲ್ಲುವುದರಲ್ಲಿ ಆಶ್ಚರ್ಯವಿಲ್ಲ.