ಸದ್ಯಕ್ಕಿಲ್ಲ ‘ಖರಾಬು’ ಶುಕ್ರವಾರ ಬಿಡುಗಡೆಯಾಗಬೇಕಿದ್ದ ‘ಪೊಗರು’ ಹಾಡು ಪೋಸ್ಟ್‌ಪೋನ್

Pogaru 1
Published on

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರದ ‘ಖರಾಬು’ ಹಾಡು ಶುಕ್ರವಾರ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಬೇಕಿತ್ತು. ಧ್ರುವ ಅಭಿಮಾನಿಗಳು ಸಹ ಕಳೆದ ಕೆಲವು ದಿನಗಳಿಂದ, ಮಾರ್ಚ್ 27ರಂದು ಆ ಹಾಡನ್ನು ಕಣ್ತುಂಬಿಕೊಳ್ಳಬೇಕು ಎಂದು ಕಾಯುತ್ತಲೇ ಇದ್ದರು. ಆದರೆ, ಅಂದುಕೊಂಡಂತೆ ಆ ಹಾಡು ಬಿಡುಗಡೆಯಾಗುತ್ತಿಲ್ಲ. ಎಂಟು ದಿನಗಳ ನಂತರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಧ್ರುವ ಸರ್ಜಾ, ‘ಕರೊನಾದಿಂದಾಗಿರೋ ಅವಾಂತರ ಸೂಕ್ಷ್ಮವಾಗಿ ಗಮನಿಸುತ್ತಲೇ ಬಂದಿದ್ದೇವೆ. ನಾಡಿನ ಯಾರೊಬ್ಬರ ಮನೆಯಲ್ಲೂ ಸಂಭ್ರಮವಿಲ್ಲ. ಇಂತ ವಾತಾವರಣದಲ್ಲಿ ನಮ್ಮ ‘ಪೊಗರು’ ಸಿನಿಮಾದ ಸಂಭ್ರಮ ಹೇರುವುದು ಬೇಡವೆಂದು ನಮ್ಮ ತಂಡ ನಿರ್ಧರಿಸಿದೆ. ಅತೀ ಶೀಘ್ರದಲ್ಲೇ ‘ಕರಾಬು’ ಹಾಡು ಬಿಡುಗಡೆಯಾಗಲಿದೆ. ಅಲ್ಲಿಯವರೆಗೂ ಅಭಿಮಾನಿಗಳ ಆರೋಗ್ಯವೇ ಮಹಾಭಾಗ್ಯ. ಮನೆಯಲ್ಲಿರಿ. ಜೈ ಆಂಜನೇಯ’ ಎಂದು ಧ್ರುವ ಸರ್ಜಾ ಟ್ವೀಟ್ ಮಾಡಿದ್ದಾರೆ.

ಇನ್ನು ನಿರ್ದೇಶಕ ನಂದಕಿಶೋರ್, ‘ಎಲ್ಲೂ ಸಂಭ್ರಮದ ವಾತಾವರಣವಿಲ್ಲ. ಈ ಬಾರಿ ಹಬ್ಬ ಆಚರಿಸಿರುವವರು ಸಹ ಕಡಿಮೆಯೇ. ಇಂತಹ ಸಂದರ್ಭದಲ್ಲಿ ನಮ್ಮ ‘ಪೊಗರು’ ಚಿತ್ರದ ಹಾಡು ಬಿಡುಗಡೆ ಮಾಡುವುದು ತಪ್ಪಾಗುತ್ತದೆ. ಹಾಗಾಗಿ ಎಂಟು ದಿನಗಳ ನಂತರ ಹಾಡನ್ನು ಬಿಡುಗಡೆ ಮಾಡುವುದಕ್ಕೆ ತೀರ್ಮಾನಿಸಿದ್ದೇವೆ’ ಎಂದು ಹೇಳುತ್ತಾರೆ.

‘ಪೊಗರು’ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಇನ್ನು ಒಂದು ಹಾಡು ಮಾತ್ರ ಬಾಕಿ ಇದೆ. ಚಿತ್ರೀಕರಣ ಚಟುವಟಿಕೆಗಳು ಪ್ರಾರಂಭವಾದ ಮೇಲೆ, ಹೈದರಾಬಾದ್‌ನಲ್ಲಿ ಈ ಹಾಡಿನ ಚಿತ್ರೀಕರಣ ಮಾಡಲಾಗುತ್ತದೆ ಎಂದು ಹೇಳಿದ್ದಾರೆ ನಂದಕಿಶೋರ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net