ಮತ್ತೊಂದು ತಿರುವು ಪಡೆದ ಪೊಗರು ಚಿತ್ರದ ವಿವಾದ: ಚಲನಚಿತ್ರ ವಾಣಿಜ್ಯ ಮಂಡಳಿಗೆ ಅಭಿಮಾನಿಗಳ ಮುತ್ತಿಗೆ!

Pogaru
Published on

ಬೆಂಗಳೂರು: ನಟ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದ ವಿವಾದ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಚಲನಚಿತ್ರ ವಾಣಿಜ್ಯ ಮಂಡಳಿಗೆ ಏಕಾಏಕಿ ಮುತ್ತಿಗೆ ಹಾಕಿರುವ ಧ್ರುವ ಅಭಿಮಾನಿಗಳು ಬ್ರಾಹ್ಮಣ ಸಮುದಾಯದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

ಧ್ರುವ ಸರ್ಜಾ ಅಭಿಮಾನಿಗಳಿಗೆ ಅಂಬೇಡ್ಕರ್​ ಸೇನೆಯು ಸಹ ಸಾಥ್ ನೀಡಿದ್ದು, ಫಿಲ್ಮ್ ಚೇಂಬರ್​ಗೆ ದೂರು ನೀಡಿದ್ದಾರೆ. ಬಳಿಕ ಮಾತನಾಡಿದ ಅಂಬೇಡ್ಕರ್ ಸೇನೆ ಅಧ್ಯಕ್ಷ ಮೂರ್ತಿ, ಸಿನಿಮಾ ಅಂದರೆ ಕೇವಲ ಕಾಲ್ಪನಿಕ. ಕೆಲವೊಮ್ಮೆ ಇಂತಹ ದೃಶ್ಯಗಳನ್ನು ಮಾಡಬೇಕಾಗುತ್ತದೆ. ಈಗಾಗಲೇ ಚಿತ್ರದ ನಿರ್ದೇಶಕರು ಮತ್ತು ನಿರ್ಮಾಪಕರು ಕ್ಷಮೆ ಕೇಳಿದ್ದಾರೆ. ಪೊಗರು ಸಿನಿಮಾ‌ ಉತ್ತಮ‌ ಪ್ರದರ್ಶನ ಕಾಣುತ್ತಿದೆ. ಇಂತ ದೃಶ್ಯಗಳನ್ನು ಕೆಲವರು ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಬಗ್ಗೆ ಕೆಟ್ಟದಾಗಿ ಪ್ರಚಾರ ಮಾಡ್ತಿದ್ದಾರೆ ಎಂದು ಆರೋಪಿಸಿದರು.

ಬ್ರಾಹ್ಮಣ ಸಮುದಾಯದ ಒತ್ತಾಯದಂತೆ ರಾತ್ರೋ ರಾತ್ರಿ ವಿವಾದಾತ್ಮಕ ದೃಶ್ಯಗಳಿಗೆ ಚಿತ್ರತಂಡ ಕತ್ತರಿ ಹಾಕಿದೆ. ಆದರೆ, ಇದೀಗ ಬ್ರಾಹ್ಮಣ ಸಮುದಾಯದ ಕೆಲವರು ಅದನ್ನೇ ಈಗ ನೆಪವಾಗಿಸಿಕೊಂಡು ಪೊಗರು ವಿವಾದದ ಬಗ್ಗೆ ಪದೇ ಪದೇ ಅಪಪ್ರಚಾರ ಮಾಡಬಾರದು. ಯಾರೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಾಕಾರಿ ಹೇಳಿಕೆ ಕೊಟ್ಟಲ್ಲಿ ಅವರ ಮೇಲೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಾ ಗೋವಿಂದು ಎಚ್ಚರಿಕೆ ನೀಡಿದ್ದಾರೆ.

ಬ್ರಾಹ್ಮಣ ಸಮುದಾಯದವರು ತಿಳಿಸಿದಂತೆ ಈಗಾಗಲೇ ಚಿತ್ರದ ದೃಶ್ಯವನ್ನ ತೆಗೆದು ಹಾಕಿದ್ದೇವೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ವಿಮರ್ಶೆ ಮಾಡಲಾಗುತ್ತಿದೆ. ಇದರಿಂದ ಸಿನಿಮಾಗೆ ಅನ್ಯಾಯ ಆಗುತ್ತಿದೆ. ಹೀಗಾಗಿ ಇಂತಹ‌ ಘಟನೆ ಮುಂದುವರೆಯಬಾರದು ಎಂದು ವಾಣಿಜ್ಯ ಮಂಡಳಿಗೆ ಧ್ರುವ ಅಭಿಮಾನಿಗಳು ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಧ್ರುವ ಸರ್ಜಾ ಮತ್ತು ಪೊಗರು ಸಿನಿಮಾ ವಿರುದ್ಧ ಮಾತನಾಡಿರುವ ನಿರೂಪಕ ಚಿರು ಭಟ್ ಮೇಲೆ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದು, ಕೂಡಲೇ ಕ್ಷಮೆ ಕೇಳಬೇಕೆಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ. ಇಲ್ಲವಾದ್ರೆ ಅವನ ಮನೆಗೇ ಹೋಗಿ ಮುತ್ತಿಗೆ ಹಾಕ್ತೀವಿ ಎಂದು ಎಚ್ಚರಿಸಿದ್ದಾರೆ. ಇದೇ ವೇಳೆ ನಿರ್ದೇಶಕ ರವಿಶ್ರೀವತ್ಸ ವಿರುದ್ಧವೂ ಅಭಿಮಾನಿಗಳು ಆಕ್ರೊಶ ಹೊರಹಾಕಿದರು.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net