

ಮುಂಬೈ: ಖ್ಯಾತ ಹಿನ್ನೆಲೆ ಗಾಯಕ ಅರ್ಮಾನ್ ಮಲಿಕ್ ಹಾಗೂ ಸಂಗೀತ ನಿರ್ದೇಶಕ ಅಮಲ್ ಮಲ್ಲಿಕ್ ತಮ್ಮ ಪ್ರೀತಿಯ ಅಜ್ಜಿ ಕಳೆದುಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಜ್ಜಿಯನ್ನು ತಬ್ಬಿಕೊಂಡಿರುವ ವಿಡಿಯೋ ಹಂಚಿಕೊಂಡು ಸಂತಾಪ ಸೂಚಿಸಿದ್ದಾರೆ.
ಅರ್ಮಾನ್ ಮಲಿಕ್ ಮತ್ತು ಅಮಲ್ ಮಲ್ಲಿಕ್ ಅವರು ತಮ್ಮ ಪ್ರೀತಿಯ ಅಜ್ಜಿ ನಿಧನ ಹೊಂದಿರುವುದಕ್ಕೆ ಬೇಸರ ವ್ಯಕ್ತಪಡಿಸಿ, ಇನ್ಸ್ಟಾಗ್ರಾಂನಲ್ಲಿ ಹಳೆ ನೆನಪುಗಳನ್ನು ಮೆಲಕು ಹಾಕಿದ್ದಾರೆ. ನನ್ನ ಜೀವನದ ಬೆಳಕು ಅಂದರೆ ಅದು ನನ್ನ ದಾದಿಜಾನ್, ಇಂದು ನನ್ನ ಉತ್ತಮ ಸ್ನೇಹಿತೆಯನ್ನು ಕಳೆದುಕೊಂಡಿದ್ದೇನೆ ಎಂದು ಭಾವನಾತ್ಮಕವಾಗಿ ಬರೆದಿದ್ದಾರೆ.
ನಿಮ್ಮ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ ಎಂದು ನನಗೆ ತಿಳಿದಿದೆ. ನಿಮ್ಮೊಂದಿಗೆ ತುಂಬಾ ಸಮಯವನ್ನು ಕಳೆದಿದ್ದೇನೆ, ನಿಮ್ಮ ಪ್ರೀತಿ, ಅಪ್ಪುಗೆ, ಮುತ್ತುಗಳಿಗೆ ನಾನು ಕೃತಜ್ಞನಾಗಿದ್ದೇನೆ. ನಿಮ್ಮ ಆತ್ಮಕ್ಕೆ ಅಲ್ಲಾ ಶಾಂತಿ ನೀಡಲಿ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ಅಜ್ಜಿಯನ್ನು ತಬ್ಬಿಕೊಂಡಿರುವ ವಿಡಿಯೋವನ್ನು ಅರ್ಮಾನ್ ಮಲಿಕ್ ಹಂಚಿಕೊಂಡಿದ್ದು, ಚಲನಚಿತ್ರ ಮತ್ತು ಸಂಗೀತ ಉದ್ಯಮದ ಸದಸ್ಯರು ಸಹ ಸಂತಾಪ ಸೂಚಿಸಿದ್ದಾರೆ.