'ಪವರ್​ ಸ್ಟಾರ್​'ಗೂ ಎದುರಾಯ್ತು ಪೈರಸಿ ಕಾಟ!

RGV - Final
Published on

ಭಾರತೀಯ ಚಿತ್ರರಂಗ ಇತ್ತೀಚಿನ ವರ್ಷಗಳಲ್ಲಿ ಪೈರಸಿ ಕಾಟದಿಂದ ಸಾಕಷ್ಟು ಕಂಗೆಟ್ಟಿದೆ ಎಂದರೆ ತಪ್ಪಿಲ್ಲ. ಹಲವು ದೊಡ್ಡ ಬಜೆಟ್​ನ ಚಿತ್ರಗಳು ಬಿಡುಗಡೆಯಾದ ಕೆಲವೇ ಸಮಯದಲ್ಲಿ ಪೈರಸಿಯಾಗಿ ಆನ್​ಲೈನ್​ನಲ್ಲಿ ಸಿಕ್ಕ ಉದಾಹರಣೆಗಳು ಹಲವಿದೆ.

ಇತ್ತೀಚೆಗಷ್ಟೇ, ಜ್ಯೋತಿಕಾ ಅಭಿನಯದ 'ಪೊನ್ಮಗಳ್​ ವಂದಾಳ್​' ಚಿತ್ರ ಅಮೇಜಾನ್​ ಪ್ರೈಮ್​ನಲ್ಲಿ ಬಿಡುಗಡೆಯಾದ ಕೆಲವೇ ಸಮಯದಲ್ಲಿ, ಆನ್​ಲೈನ್​ನಲ್ಲೂ ಬಿಡುಗಡೆಯಾಗಿತ್ತು. ಈಗ ರಾಮ್​ಗೋಪಾಲ್​ ವರ್ಮಾ ನಿದೇರ್ಶನದ 'ಪವರ್​ ಸ್ಟಾರ್​' ಸಹ ಬಿಡುಗಡೆಯಾಗಿದೆ.

'ಪವರ್​ ಸ್ಟಾರ್​' ಚಿತ್ರವು ಶನಿವಾರವಷ್ಟೇ ಆರ್​ಜಿವಿವರ್ಲ್ಡ್​ ಜೂಮಿನ್​ ವೆಬ್​ಸೈಟ್​ನಲ್ಲಿ ಬಿಡುಗಡೆಯಾಗಿತ್ತು. ಚಿತ್ರ ಪ್ರದರ್ಶನಕ್ಕೆ ಒಂದಿಷ್ಟು ಹಣವನ್ನೂ ನಿಗದಿ ಮಾಡಿದ್ದರು. ಅಷ್ಟೇ ಅಲ್ಲ, ಅದರಲ್ಲಿ ಅಡ್ವಾನ್ಸ್​ ಬುಕ್ಕಿಂಗ್​ ಸಹ ಇಟ್ಟಿದ್ದರು. ಆದರೆ, ಚಿತ್ರ ಬಿಡುಗಡೆಯಾದ ಕೆಲವೇ ಸಮಯದಲ್ಲಿ ಪೈರಸಿಯಾಗಿ, ಹಲವು ವೆಬ್​ಸೈಟ್​ಗಳಲ್ಲಿ ಚಿತ್ರ ಪ್ರದಶರ್ನವಾಗುತ್ತಿದೆ.

ರಾಮ್​ಗೋಪಾಲ್​ ವರ್ಮಾ, ಇಂಥದ್ದೊಂದು ಸಿನಿಮಾ ಮಾಡುತ್ತಿರುವ ಬಗ್ಗೆ ಸಿಟ್ಟಾಗಿದ್ದ 'ಪವರ್ ಸ್ಟಾರ್​' ಪವನ್​ ಕಲ್ಯಾಣ್​ ಅವರ ಅಭಿಮಾನಿಗಳು ಬಹಳ ಖುಷಿಯಾಗಿದ್ದಾರೆ. ಸ್ಕ್ರೀನ್​ಶಾಟ್​ಗಳನ್ನು ತೆಗೆದು ವರ್ಮಾಗೆ ಟ್ಯಾಗ್​ ಮಾಡುತ್ತಿದ್ದಾರೆ.

ಈಗಾಗಲೇ 'ನೇಕೆಡ್​' ಚಿತ್ರದಿಂದ ಸಾಕಷ್ಟು ಹಣ ಮಾಡಿದ್ದ ರಾಮ್​ಗೋಪಾಲ್​ ವರ್ಮಾ, ಇಂಥದ್ದೊಂದು ವಿವಾದಾತ್ಮಕ ಚಿತ್ರದಿಂದ ಇನ್ನಷ್ಟು ಸಂಪಾದಿಸಬಹುದು ಎಂದು ಅಂದುಕೊಂಡಿದ್ದರೇನೋ? ಆದರೆ, ಮೊದಲು ಟ್ರೇಲರ್​ ಪೈರಸಿಯಾಯಿತು. ಇದೀಗ ನೋಡಿದರೆ ಚಿತ್ರವೇ ಪೈರಸಿಯಾಗಿಬಿಟ್ಟಿದೆ.

ಹಾಗೆ ನೋಡಿದರೆ, ವರ್ಮಾಗೆ ಪೈರಸಿ ಬಗ್ಗೆ ಬೇಸರವೇನೂ ಇಲ್ಲ. ಏಕೆಂದರೆ, ಪೈರಸಿ ಚಿತ್ರಗಳನ್ನು ನೋಡುವುದಾಗಿ, ಅವರೇ ಹಿಂದೊಮ್ಮೆ ಹೇಳಿಕೊಂಡಿದ್ದಾರೆ. ಈಗ ಅದೇ ಪೈರಸಿ ಅವರಿಗೇ ಮುಳುವಾಗಿದೆ. 'ಪವರ್​ ಸ್ಟಾರ್' ಚಿತ್ರದಿಂದ ಒಂದಿಷ್ಟು ಲಾಭ ಕಾಣಬಹುದು ಎಂದು ಕಾಯುತ್ತಿದ್ದವರಿಗೆ, ಇದರಿಂದ ನಿಜಕ್ಕೂ ಬೇಸರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net