ರೋಮಾಂಚನೀಯ ‘ಪಿನಾಕ’: ಬಹುವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ ಗಣೇಶ್ ಅಭಿನಯದ ಮುಂದಿನ ಸಿನಿಮಾ

pinaka
Published on

ಬೆಂಗಳೂರು: ‘ಕೃಷ್ಣಂ ಪ್ರಣಯ ಸಖಿ’ ಹಿಟ್ ಬಳಿಕ ನಟ ಗಣೇಶ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಸದ್ಯ ಅವರು ಮೂರು ಚಿತ್ರಗಳ ಶೂಟಿಂಗ್ ನಡೆಸುತ್ತಿದ್ದು, ಅದರಲ್ಲಿ ‘ಪಿನಾಕ’ ಒಂದು. ನೃತ್ಯ ನಿರ್ದೇಶಕ ಧನಂಜಯ್ ಆ್ಯಕ್ಷನ್-ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ ಗಣೇಶ್ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಭರದಿಂದ ಚಿತ್ರೀಕರಣ ಸಾಗುತ್ತಿದ್ದು, ಇದಕ್ಕಾಗಿ ಬೆಂಗಳೂರಿನ ಹೊರವಲಯದಲ್ಲಿ ಬಹುವೆಚ್ಚದಲ್ಲಿ ಸೆಟ್ ನಿರ್ಮಿಸಲಾಗಿದೆ. ಇತ್ತೀಚೆಗೆ ಸೆಟ್‌ನಲ್ಲಿಯೇ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ, ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿತು. ನಟ ಗಣೇಶ್, ‘ನಾನು ಬಹಳ ಖುಷಿಪಟ್ಟು ಮಾಡುತ್ತಿರುವ ಸಿನಿಮಾ ಇದು. ರೆಗ್ಯುಲರ್ ಶೈಲಿಯ ಸಿನಿಮಾ ಅಲ್ಲ. ವಿಭಿನ್ನ ಅವತಾರದಲ್ಲಿ ನನ್ನನ್ನು ತೋರಿಸಬಹುದು ಎಂಬುದನ್ನು ಈ ತಂಡ ಸಾಬೀತು ಮಾಡಿದೆ. ಅದಕ್ಕಾಗಿ ನಾನೊಬ್ಬ ಕಲಾವಿದನಾಗಿ ಆಭಾರಿ. ಸೆಟ್ ನಿರ್ಮಾಣಕ್ಕೆ ಸುಮಾರು ನಾಲ್ಕೈದು ತಿಂಗಳ ಕಾಲ ಸಮಯ ತೆಗೆದುಕೊಂಡಿದ್ದು, ದೊಡ್ಡಮಟ್ಟದಲ್ಲಿ ಶೂಟಿಂಗ್ ಮಾಡಲಾಗುತ್ತಿದೆ. ದಿನಕ್ಕೆ ನಾಲ್ಕು ಕ್ಯಾಮರಾ ಕೆಲಸ ಮಾಡುತ್ತಿವೆ. ಎರಡನೇ ಹಂತದ 32 ದಿನದ ಶೂಟಿಂಗ್ ಹಾಗೂ ‘ಪಿನಾಕ’ ಪಾತ್ರವು ನನಗೆ ರೋಮಾಂಚನೀಯ ಅನುಭವ ನೀಡಿದೆ. ನನ್ನ ವೃತ್ತಿ ಬದುಕಿನ ಬೇರೆಯದ್ದೇ ಸಿನಿಮಾವಾಗಲಿದ್ದು, ನಿಜಕ್ಕೂ ಪ್ರೇಕ್ಷಕರಿಗೆ ಇದು ಇಷ್ಟವಾಗಲಿದೆ. ನನ್ನ ಭಾಷೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ, ನಮ್ಮ ಮಾತೃ ಭಾಷೆಯನ್ನು ನಾನು ಚೆನ್ನಾಗಿ ಮಾತನಾಡದೆ ಮತ್ಯಾರು ಮಾತನಾಡುತ್ತಾರೆ ಎಂಬುದಷ್ಟೇ ನನ್ನ ಅನಿಸಿಕೆ’ ಎನ್ನುವ ಮೂಲಕ ‘ಪಿನಾಕ’ ಜರ್ನಿ ಹಂಚಿಕೊಂಡರು. ಶ್ರೀನಿವಾಸಮೂರ್ತಿ, ಹೊನ್ನವಳ್ಳಿ ಕೃಷ್ಣ, ರವೀಂದ್ರನಾಥ್ ಕಲಾ ಬಳಗದಲ್ಲಿದ್ದಾರೆ.

ಪ್ರತಿ ದಿನ 800 ಕಲಾವಿದರು ಭಾಗಿ: ‘ಪಿನಾಕ’ ದೊಡ್ಡಮಟ್ಟದಲ್ಲಿ ನಿರ್ಮಾಣವಾಗುತ್ತಿದೆ ಎಂದು ಭರವಸೆ ವ್ಯಕ್ತಪಡಿಸಿದ ನಿರ್ದೇಶಕ ಧನಂಜಯ್, ‘ಈಗಾಗಲೇ ಮೊದಲ ಹಂತದ 15 ದಿನ ಹಾಗೂ ಎರಡನೇ ಹಂತದ 32 ದಿನ ಶೂಟಿಂಗ್ ಮಾಡಿದ್ದೇವೆ. ಸುಮಾರು 500 ವರ್ಷಗಳ ಹಿಂದೆ ಇದ್ದ ದೇವಗಿರಿ ಎಂಬ ಸಾಮ್ರಾಜ್ಯವನ್ನು ಸೆಟ್ ಮೂಲಕ ತೋರಿಸುತ್ತಿರುವುದು ಈ ಚಿತ್ರದ ವಿಶೇಷತೆ. ಕಾಲ್ಪನಿಕ ಕಥೆಯಾಗಿದೆ. ಚಿತ್ರದಲ್ಲಿ ಯುದ್ಧದ ಸನ್ನಿವೇಶಗಳಿದ್ದು, ಶೂಟಿಂಗ್ ಮಾಡಲಾಗಿದೆ. ಪ್ರತಿ ದಿನ 800ಕ್ಕೂ ಹೆಚ್ಚು ಜನ ಕಲಾವಿದರು ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ. ಸಂತೋಷ್ ಪಾಂಚಾಲ ಕಲಾ ನಿರ್ದೇಶನದಲ್ಲಿ ಅದ್ಭುತವಾಗಿ ಸೆಟ್ ನಿರ್ಮಿಸಲಾಗಿದೆ. ಹೈದರಾಬಾದ್‌ನಲ್ಲಿ ಸಿಜಿ ವರ್ಕ್ ನಡೆಸಲಾಗುತ್ತಿದೆ. ಈ ಚಿತ್ರಕ್ಕೆ ತುಂಬಾ ಸಿದ್ಧತೆ ಬೇಕಾಗಿರುವುದರಿಂದ ನಾವು ಯಾವುದೇ ಒತ್ತಡದಲ್ಲಿ ನಿರ್ಮಿಸುತ್ತಿಲ್ಲ. ತಾಳ್ಮೆಯಿಂದ ಸಿನಿಮಾ ಶೂಟಿಂಗ್ ನಡೆಯುತ್ತಿದ್ದು, ಸಿಜೆ ವರ್ಕ್, ಕಲರಿಂಗ್‌ಗೆ ಹೆಚ್ಚು ದಿನ ಬೇಕಾಗುತ್ತದೆ. ಹಾಗಾಗಿ, ನಾವು ಮುಂದಿನ ವರ್ಷ ಸಿನಿಮಾ ರಿಲೀಸ್‌ಗೆ ಯೋಚಿಸುತ್ತಿದ್ದೇವೆ. ಇನ್ನು ಈ ಚಿತ್ರದಲ್ಲಿ ನಯನಾ ಸಾರಿಕಾ ಹಾಗೂ ಅರ್ಚನ್ ಅಯ್ಯರ್ ಇಬ್ಬರು ನಾಯಕಿಯರಿದ್ದು, ಅವರನ್ನು ಮುಂದಿನ ದಿನಗಳಲ್ಲಿ ಪರಿಚಯಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net