ವಾಸ್ತವ ಮತ್ತು ಭ್ರಮೆಯ ಸುತ್ತ..; ಫಿಸಿಕ್ಸ್ ಟೀಚರ್ ಸಿನಿಮಾ ವಿಮರ್ಶೆ

Physics Teacher
Published on
  • ಚಿತ್ರ: ಫಿಸಿಕ್ಸ್ ಟೀಚರ್
  • ನಿರ್ದೇಶನ: ಸುಮುಖ
  • ನಿರ್ಮಾಣ: ಪಾಸಿಂಗ್ ಶಾಟ್ ಫಿಲಂಸ್
  • ತಾರಾಗಣ: ಸುಮುಖ ಪ್ರೇರಣಾ ಕಂಬಂ, ರಾಜೇಶ್ ನಟರಂಗ, ಮಂಡ್ಯ ರಮೇಶ್

| ಚೇತನ್ ನಾಡಿಗೇರ್

ತಾನಿಲ್ಲದಾಗ ತನ್ನ ಕೋಣೆಗೆ ಯಾರೋ ಬಂದು ಹೋಗುತ್ತಿದ್ದಾರೆ ಅಂತ ಬಲವಾಗಿ ಅನಿಸೋಕೆ ಶುರುವಾಗುತ್ತದೆ ಅವನಿಗೆ. ಏಕೆಂದರೆ, ಆ ಕೋಣೆಯಲ್ಲಿ ಕೆಲವು ವಸ್ತುಗಳು ನಿಗೂಢವಾಗಿ ಕಣ್ಮರೆಯಾಗುತ್ತಿರುತ್ತವೆ. ಚಿಪ್ಸ್ ಪ್ಯಾಕೆಟ್, ಆಟದ ಗೊಂಬೆಗಳು, ಕಾಮಿಕ್ ಬುಕ್​ಗಳು ... ಹೀಗೆ ಮನೆಯಲ್ಲಿದ್ದ ವಸ್ತುಗಳು ಕ್ರಮೇಣ ನಾಪತ್ತೆಯಾಗುತ್ತಿರುತ್ತದೆ. ಆದರೆ, ಯಾವಾಗ ಒಂದು ದಿನ ಗೋಡೆಯ ಮೇಲೆ ‘ಐ ಹೇಟ್ ಫಿಸಿಕ್ಸ್’ ಎಂದು ಬರೆದಿರುತ್ತದೋ, ಆಗ ಅಲ್ಲೇನೋ ಗಂಭೀರವಾದ ಸಮಸ್ಯೆ ಇರಬಹುದು ಅಂತ ಅವನಿಗಸೋಕೆ ಶುರುವಾಗುತ್ತದೆ. ಆದರೆ, ಸಮಸ್ಯೆ ಇರುವುದು ಮನೆಯಲ್ಲೋ ಅಥವಾ ಅವನಲ್ಲೋ?

ಫಿಸಿಕ್ಸ್ ತನ್ನ ಜೀವನದ ಅವಿಭಾಜ್ಯ ಅಂಗ ಮತ್ತು ಎಲ್ಲ ವಿಷಯಗಳಿಗೂ ಭೌತಶಾಸ್ತ್ರ ಅಡಿಪಾಯ ಎಂದು ನಂಬಿರುವ ಟೀಚರ್​ನ ಕಥೆ ಇದು. ಯಾವುದೇ ವಿಷಯವನ್ನೂ ತರ್ಕಬದ್ಧವಾಗಿ ಯೋಚಿಸಬೇಕು ಎಂಬ ಅವನ ನಿಲುವು ಕ್ರಮೇಣ ಬದಲಾಗುತ್ತಾ ಹೋಗುತ್ತದೆ. ಅಲೌಕಿಕ ಶಕ್ತಿಗಳನ್ನು ನಂಬದವನು ಕ್ರಮೇಣ ಅದು ನಿಜವಿದ್ದರೂ ಇರಬಹುದಾ ಎಂದು ಯೋಚಿಸುವಂತಾಗುತ್ತದೆ. ಇದು ವಾಸ್ತವತೆಯಾ? ಭ್ರಮೆಯಾ? ಅಥವಾ ಇನ್ನೇನಾದರೂ ಕಾರಣವಿದೆಯಾ?

ಭ್ರಮೆ ಮತ್ತು ವಾಸ್ತವದ ಕುರಿತಾಗಿ ಬೇರೆ ಭಾಷೆಗಳಲ್ಲಿ ಹಲವು ಚಿತ್ರಗಳು ಬಿಡುಗಡೆಯಾಗಿವೆ. ಕನ್ನಡದಲ್ಲಿ ಇಂಥ ಪ್ರಯೋಗಗಳು ಕಡಿಮೆಯೇ. ಮೊದಲ ಚಿತ್ರದಲ್ಲೇ ಇಂಥದ್ದೊಂದು ಪ್ರಯೋಗ ಮಾಡಿದ್ದಾರೆ ಸುಮುಖ. ಮನಸ್ಸಿಗೆ ಸಂಬಂಧಿಸಿದ ಚಿತ್ರಗಳನ್ನು ತೆರೆಯ ಮೇಲೆ ತರುವುದು ಬಹಳ ಕಷ್ಟ. ಚಿತ್ರದಲ್ಲಿ ನಾಯಕ ಏನೆಲ್ಲ ತಳಮಳಗಳನ್ನು ಅನುಭವಿಸುತ್ತಾನೋ, ಅದೇ ತಳಮಳಗಳನ್ನು ಸುಮುಖ ನಿರ್ದೇಶಕನಾಗಿಯೂ ಎದುರಿಸುತ್ತಾರೆ.

ಯಾವ ವಿಷಯವನ್ನು ಎಷ್ಟು ಹೇಳಬೇಕು? ಗುಟ್ಟು ಬಿಟ್ಟುಕೊಡದೆ ಏನೆಲ್ಲ ಹೇಳಬಹುದು? ಇಂಥದ್ದೊಂದು ಗಂಭೀರ ಕಥೆಯನ್ನು ಬೋರ್ ಆಗದಂತೆ ಹೇಳುವುದು ಹೇಗೆ? ಇಂಥ ಗೊಂದಲಗಳು ಅವರನ್ನು ಕಾಡಿದೆ ಮತ್ತು ಆ ಗೊಂದಲಗಳ ಮಧ್ಯೆಯೇ ಸುಮುಖ ಚಿತ್ರ ನಿರೂಪಿಸುವ ಪ್ರಯತ್ನ ಮಾಡಿದ್ದಾರೆ. ಕೆಲವೊಂದು ಅಂಶಗಳು ನೀರಸವೆನಿಸುವಂತಿದ್ದರೆ, ಇನ್ನೂ ಕೆಲವು ಥ್ರಿಲ್ ಕೊಡುವಂತಿವೆ. ಇಂಥ ಹೊಯ್ದಾಟಗಳ ಮಧ್ಯೆಯೇ ಭ್ರಮೆ ಮತ್ತು ವಾಸ್ತವತೆಯ ಕುರಿತಾದ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.

ನಿರ್ದೇಶಕ ಸುಮುಖಗಿರುವ ಗೊಂದಲಗಳು ನಟ ಸುಮುಖಗಿಲ್ಲ. ಹಾಗಾಗಿ, ಅವರು ಪಾತ್ರವನ್ನು ತಮ್ಮ ಅಭಿನಯದ ಮೂಲಕ ಕಟ್ಟಿಕೊಟ್ಟಿದ್ದಾರೆ. ಪ್ರೇರಣಾ ಮುದ್ದಾಗಿ ಕಾಣುತ್ತಾರೆ. ರಾಜೇಶ್ ನಟರಂಗ ನಟನೆ, ಆಡುವ ಮಾತುಗಳು ನೋಡಿಯೇ ಅನುಭವಿಸಬೇಕು ಎನ್ನುವಷ್ಟರ ಮಟ್ಟಿಗೆ ಚೆನ್ನಾಗಿದೆ. ನಿಗೂಢವೆನ್ನುವಂತಹ ಪಾತ್ರವನ್ನು ಮಂಡ್ಯ ರಮೇಶ್ ಚೆನ್ನಾಗಿ ನಿರ್ವಹಿಸಿದ್ದಾರೆ. ಸ್ಕಂದಾ ಸುಬ್ರಹ್ಮಣ್ಯ ಅವರ ಸಂಗೀತದಲ್ಲಿ ಮೂಡಿಬಂದಿರುವ ‘ಮನದಾಳದ ...’ ಹಾಡು ಮತ್ತು ರಘು ಗ್ಯಾರಹಳ್ಳಿ ಅವರ ಛಾಯಾಗ್ರಹಣ ಗಮನಸೆಳೆಯುವಂತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net