

ಬೆಂಗಳೂರು: ವಿಕ್ರಮ್ ಯೋಗಾನಂದ ತಯಾರಿಸಿರುವ ‘ಕುಷ್ಕ’ ಘಮಕ್ಕೆ ಜನ ಮನಸೋತಿದ್ದಾರೆ. ಅಂದರೆ ವಿಕ್ರಮ್ ನಿರ್ದೇಶನದ ‘ಕುಷ್ಕ’ ಚಿತ್ರದ ಟೀಸರ್ ಬಿಡುಗಡೆ ಆಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕೂಡ ಭಾರಿ ಸದ್ದು ಮಾಡುತ್ತಿದೆ.
‘ಮಠ’ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಟೀಸರ್ನಲ್ಲಿ ಕಾಮಿಡಿ, ಪಂಚಿಂಗ್ ಡೈಲಾಗ್ ಮೂಲಕ ಮೋಡಿ ಮಾಡಿದ್ದಾರೆ. ಡೈಮಂಡ್ ಬಿಜಿನೆಸ್ ಸುತ್ತ ಸುತ್ತುವ ಕಥೆಯನ್ನು ಕಾಮಿಡಿ ಆಗಿ ತೋರಿಸಲಾಗಿದೆ. ಕೈಲಾಶ್ ಪಾಲ್, ಶೋಭರಾಜ್, ಸಂಜನಾ ಆನಂದ್ ಹಾಗೂ ಕಿರುತೆರೆ ಖ್ಯಾತಿಯ ಚಂದುಗೌಡ ಪ್ರಮುಖ ಪಾತ್ರವರ್ಗದಲ್ಲಿದ್ದಾರೆ.
ಈ ಹಿಂದೆ ‘ಸಿಂಪಲ್ ಸಲುಗೆ’ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಅಭಿಲಾಷ್ ಗುಪ್ತ ಸಂಗೀತ ಸಂಯೋಜನೆಯ, ವಿಜಯ್ ಪ್ರಕಾಶ್ ಹಾಗೂ ಸಾನ್ವಿ ಶೆಟ್ಟಿ ಗಾಯನದ ಈ ಡ್ಯುಯೆಟ್ ಸಾಂಗ್ ಸಂಗೀತಪ್ರಿಯರ ಮೆಚ್ಚುಗೆ ಗಳಿಸಿತ್ತು. ಇದೀಗ ಟೀಸರ್ಗೆ ಸಿಕ್ಕ ಒಳ್ಳೆಯ ಪ್ರತಿಕ್ರಿಯೆ ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.
‘ಹೀಗೊಂದು ದಿನ’ ಚಿತ್ರ ನಿರ್ದೇಶಿಸಿದ್ದ ವಿಕ್ರಮ್ ಯೋಗಾನಂದ ‘ಕುಷ್ಕ’ಗೆ ಆಕ್ಷನ್-ಕಟ್ ಹೇಳುವ ಜತೆಗೆ ಛಾಯಾಗ್ರಹಣ, ಸಂಕಲನದ ಜವಾಬ್ದಾರಿ ಕೂಡ ಹೊತ್ತಿದ್ದಾರೆ. ಐರಾ ಫಿಲಮ್ಸ್, ಸ್ಮಾರ್ಟ್ ಸ್ಕ್ರೀನ್ ಪ್ರೊಡಕ್ಷನ್ಸ್ ಹಾಗೂ ಪಿಎಂ ಪ್ರೊಡಕ್ಷನ್ಸ್ ಸಂಸ್ಥೆಗಳು ಬಂಡವಾಳ ಹೂಡಿರುವ ಈ ಚಿತ್ರ ಫೆಬ್ರವರಿಯಲ್ಲಿ ತೆರೆ ಕಾಣುವ ಸಾಧ್ಯತೆ ಇದೆ.