

ಟಾಲಿವುಡ್ನಲ್ಲಿ ಕನ್ನಡದ ನಟಿಯರಿಗೆ ಡಿಮಾಂಡ್ ಶುರುವಾಗಿದೆ. ಒಬ್ಬರಾದ ಮೇಲೊಬ್ಬರು ಸಿನಿಮಾ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ರಶ್ಮಿಕಾ ಮಂದಣ್ಣ, ನಭಾ ನಟೇಶ್ ತೆಲುಗು ನಟಿಯೆಂದೇ ಕರೆಸಿಕೊಳ್ಳುತ್ತಾರೆ. ಇದೀಗ, ಆ ಸಾಲಿಗೆ ಸೇರ್ಪಡೆಯಾಗುತ್ತಿದ್ದಾರೆ ಶ್ರೀಲೀಲಾ.
‘ಪೆಳ್ಳಿ ಸಂದಡಿ 2’ ಚಿತ್ರದ ಮೂಲಕ ಪಕ್ಕದ ಟಾಲಿವುಡ್ ಪ್ರವೇಶಿಸಿದ್ದ ನಟಿ ಶ್ರೀಲೀಲಾ, ಮೊದಲ ಚಿತ್ರದಲ್ಲಿಯೇ ಭರವಸೆ ಮೂಡಿಸಿದ್ದಾರೆ. ಆ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುವುದರ ಜತೆಗೆ ಶ್ರೀಲೀಲಾಗೂ ಹಲವು ಸಿನಿಮಾ ತಂಡಗಳಿಂದ ಆಫರ್ ಬಂದಿವೆ. ಅದರಲ್ಲಿ ರವಿತೇಜ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಅವಕಾಶವೂ ಒಂದು. ತ್ರಿನಾದ್ ರಾವ್ ನಕ್ಕಿನ ನಿರ್ದೇಶನದಲ್ಲಿ ‘ಧಮಾಕ’ ಸಿನಿಮಾ ಕೈಗೆತ್ತಿಕೊಂಡಿದ್ದಾರೆ ರವಿತೇಜ. ಈ ಚಿತ್ರದಲ್ಲಿ ರವಿತೇಜಗೆ ಇಬ್ಬರು ನಾಯಕಿಯರು. ಈಗಾಗಲೇ ಶ್ರೀಲೀಲಾ ಆಯ್ಕೆಯಾಗಿದ್ದು, ಮೊದಲ ಹಂತದ ಶೂಟಿಂಗ್ ಮುಗಿಸಿದ್ದಾರೆ. ಇನ್ನೋರ್ವ ನಾಯಕಿ ಯಾರು ಎಂಬುದಕ್ಕೂ ಶೀಘ್ರದಲ್ಲಿ ಉತ್ತರ ಸಿಗಲಿದೆ. ತೆಲುಗಿನಲ್ಲಿ ‘ಕಿಲಾಡಿ’ ಮತ್ತು ‘ರಾಮಾರಾವ್’ ಸಿನಿಮಾಗಳಲ್ಲಿ ರವಿತೇಜ ಬಿಜಿಯಾಗಿದ್ದರೆ, ಶ್ರೀಲೀಲಾ ಕನ್ನಡದಲ್ಲಿ ‘ಬೈ ಟು ಲವ್’ ಎಂಬ ಸಿನಿಮಾ ಮುಗಿಸಿದ್ದಾರೆ.