ಎಲ್ಲಾ ಗೊತ್ತಿದ್ದೂ ಮೌನವಾಗಿರೋದು ಯಾಕೆ? ಇರ್ಫಾನ್​ಗೆ ಪಾಯಲ್​ ಪ್ರಶ್ನೆ

Payal Ghosh - Irfaan Pathan - Final
Published on

ಮುಂಬೈ: ಕೆಲವು ವರ್ಷಗಳ ಹಿಂದೆ ಆಫೀಸಿಗೆ ಕರೆಸಿಕೊಂಡು ತಮ್ಮ ಜತೆಗೆ ಅಸಭ್ಯವಾಗಿ ವರ್ತಿಸಿದರು ಎಂದು ನಿರ್ದೇಶಕ ಅನುರಾಗ್​ ಕಶ್ಯಪ್​ ಮೇಲೆ ದಾವೆ ಹೂಡಿರುವ ಪಾಯಲ್​ ಘೋಶ್​, ಈಗ ಕ್ರಿಕೆಟಿಗ ಇರ್ಫಾನ್​ ಪಠಾಣ್​ ಮೌನವಾಗಿರೋದು ಯಾಕೆ ಎಂದು ಪ್ರಶ್ನಿಸಿದ್ದಾರೆ.

ಅನುರಾಗ್​ ಕಶ್ಯಪ್​ ಮತ್ತು ಪಾಯಲ್​ ಘೋಶ್​ ಪ್ರಕರಣಕ್ಕೂ, ಇರ್ಫಾನ್​ ಪಠಾಣ್​​ಗೂ ಏನು ಸಂಬಂಧ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ಈ ಪ್ರಶ್ನೆಯನ್ನು ಪಾಯಲ್​ ಮುಂದಿಟ್ಟರೆ, ಆತ ತನ್ನ ಸ್ನೇಹಿತ ಎಂದು ಹೇಳಿಕೊಂಡಿದ್ದಾರೆ.

'ಇರ್ಫಾನ್​ ನನ್ನ ಒಳ್ಳೆಯ ಸ್ನೇಹಿತ. ಅನುರಾಗ್​ ಕಶ್ಯಪ್​ ಘಟನೆಯನ್ನು ನಾನು ಇರ್ಫಾನ್​ ಬಳಿ ಹೇಳಿಕೊಂಡಿದ್ದೆ. ಆ ಕ್ಷಣದ ನನ್ನ ನೋವನ್ನು ಮನಬಿಚ್ಚಿ ಹಂಚಿಕೊಂಡಿದ್ದೆ. ಆತನಿಗೆ ಈ ವಿಷಯದ ಬಗ್ಗೆ, ನನ್ನ ಬಗ್ಗೆ ಸಂಪೂರ್ಣವಾಗಿ ಗೊತ್ತಿದೆ. ಅಷ್ಟೆಲ್ಲಾ ಗೊತ್ತಿದ್ದರೂ, ಅನುರಾಗ್​ ವಿರುದ್ಧ ನಾನು ಕೇಸ್​ ಹಾಕಿರುವ ಬಗ್ಗೆ ಇರ್ಫಾನ್​ ಒಂದೇ ಒಂದು ಮಾತನ್ನೂ ಆಡಿಲ್ಲ ಅಥವಾ ಈ ವಿಷಯವಾಗಿ ನನಗೆ ಸಪೋರ್ಟ್​ ಕೊಟ್ಟಿಲ್ಲ' ಎಂದು ಪಾಯಲ್​ ಬೇಸರ ವ್ಯಕ್ತಪಡಿಸಿದ್ದಾರೆ.

ಅಷ್ಟೇ ಅಲ್ಲ, ತಾನು ಅನುರಾಗ್​ ಭೇಟಿ ಮಾಡುತ್ತಿದ್ದ ವಿಷಯ ಸಹ ಇರ್ಫಾನ್​ಗೆ ಗೊತ್ತಿತ್ತು ಎಂದಿರುವ ಪಾಯಲ್​, 'ಒಮ್ಮೆ ನಾನು ಇರ್ಫಾನ್​ ಜತೆಗಿದ್ದಾಗಲೇ, ಅನುರಾಗ್​ ಅವರಿಂದ ಭೇಟಿ ಮಾಡಬೇಕೆನ್ನುವ ಮೆಸೇಜ್​ ಬಂದಿತ್ತು. ಆ ಸಂದೇಶವನ್ನು ಇರ್ಫಾನ್​ಗೆ ತೋರಿಸುವುದರ ಜತೆಗೆ, ಅಲ್ಲಿಂದ ವಾಪಸ್ಸು ಬಂದ ಮೇಲೆ ಏನೆಲ್ಲಾ ಆಯಿತು ಎಂದು ವಿವರಿಸಿದ್ದೆ. ಆತನಿಗೆ ಈ ವಿಷಯ ಗೊತ್ತಿದ್ದರೂ ಯಾಕೆ ಮಾತನಾಡುತ್ತಿಲ್ಲ, ಯಾಕೆ ನನ್ನ ಈ ಹೋರಾಟದಲ್ಲಿ ಬೆಂಬಲ ಕೊಡುತ್ತಿಲ್ಲ ಎಂಬುದು ಅರ್ಥವಾಗುತ್ತಿಲ್ಲ ಎಂದು' ಪಾಯಲ್​ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net