ಆಹಾ ಒಟಿಟಿಯಲ್ಲಿ ಮಿಂಚಲು ಸಿದ್ಧವಾದ ಡೈರೆಕ್ಟರ್ ಪವನ್; ವೆಬ್ ಸರಣಿಯ ಟ್ರೇಲರ್ ಬಿಡುಗಡೆ

kudi
Published on

ಬೆಂಗಳೂರು: ಲೂಸಿಯಾ, ಯೂ ಟರ್ನ್​ನಂತಹ ಸಿನಿಮಾಗಳನ್ನು ನಿರ್ದೇಶಿಸಿ ಕನ್ನಡದ ಸಿನಿಮಾ ಅಭಿಮಾನಿಗಳ ಮನಸ್ಸನ್ನು ಗೆದ್ದಿರುವ ನಿರ್ದೇಶಕ ಪವನ್ ಕುಮಾರ್ ಸದ್ಯ ತೆಲುಗು ಭಾಷೆಯ ವೆಬ್ ಸರಣಿಯೊಂದರ ನಿರ್ದೇಶನದಲ್ಲಿ ಬಿಜಿಯಾಗಿದ್ದಾರೆ. ಇನ್ನೇನು ಕೆಲ ದಿನಗಳಲ್ಲಿ ಒಟಿಟಿ ಮೂಲಕ ತೆರೆ ಕಾಣಲಿರುವ ವೆಬ್ ಸರಣಿಯ ಟ್ರೇಲರ್​ ಅನ್ನು ಇಂದು ಬಿಡುಗಡೆ ಮಾಡಲಾಗಿದೆ.

ಕುಡಿ ಎಡಮೈತಿ ಹೆಸರಿನಲ್ಲಿ ವೆಬ್ ಸರಣಿ ತಯಾರಾಗಿದೆ. ವಿಶೇಷವೆಂದರೆ ಇಂಗ್ಲಿಷ್ ಸಬ್​ ಟೈಟಲ್ ಇರುವ ಟ್ರೇಲರ್​ನೊಂದಿಗೆ ಕನ್ನಡ ಸಬ್​ ಟೈಟಲ್ ಇರುವ ಟ್ರೇಲರ್​ ಅನ್ನೂ ಬಿಡುಗಡೆ ಮಾಡಲಾಗಿದೆ. ಈ ಮೂಲಕ ಕನ್ನಡದ ಅಭಿಮಾನಿಗಳಿಗೂ ತಮ್ಮ ವೆಬ್ ಸೀರಿಸ್ ಅನ್ನು ನೋಡಲು ಸುಲಭವಾಗಿಸಿಕೊಟ್ಟಿದ್ದಾರೆ ಪವನ್ ಕುಮಾರ್.

ಪವನ್ ಅವರ ಕುಡಿ ಎಡಮೈತಿ ವೆಬ್ ಸರಣಿಯಲ್ಲಿ ಅಮಲಾ ಪೌಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಯೂ ಟರ್ನ್ ಸಿನಿಮಾದಲ್ಲಿ ತನ್ನೊಂದಿಗೆ ತೆರೆಯ ಹಿಂದೆ ಕೆಲಸ ಮಾಡಿದ್ದ ಅನೇಕರನ್ನು ಪವನ್ ಈ ಸರಣಿಯಲ್ಲಿ ತಂಡದಲ್ಲಿ ಇಟ್ಟುಕೊಂಡಿದ್ದಾಗಿ ಹೇಳಲಾಗಿದೆ. ಸದ್ಯ ಬಿಡುಗಡೆಯಾಗಿರುವ ಟ್ರೇಲರ್​ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕನ್ನಡದಲ್ಲೂ ವೆಬ್​ ಸೀರಿಸ್ ಮಾಡಿ ಎನ್ನುವ ಕೋರಿಕೆ ಕೇಳಿ ಬರುತ್ತಿದೆ.

ಸರಣಿಯು ಎಂಟು ಎಪಿಸೋಡ್​ಗಳನ್ನು ಹೊಂದಿದ್ದು, ತೆಲುಗಿನ ಆಹಾ ಒಟಿಟಿಯಲ್ಲಿ ಜುಲೈ 16ರಂದು ಬಿಡುಗಡೆಯಾಗಲಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net