

ಹೈದರಾಬಾದ್: ಲಾಕ್ಡೌನ್ ಮುಗಿದ ನಂತರ ಟಾಲಿವುಡ್ ನಟ 'ಪವರ್ ಸ್ಟಾರ್' ಪವನ್ ಕಲ್ಯಾಭ್ ಅವರು ಸದ್ದಿಲ್ಲದೆ 'ವಕೀಲ್ ಸಾಬ್' ಚಿತ್ರ ಮುಗಿಸಿದ್ದಾರೆ. ಸದ್ಯದಲ್ಲೇ ಮಲಯಾಳಂ ಹಿಟ್ 'ಅಯ್ಯಪ್ಪನುಂ ಕೋಶಿಯುಂ' ಚಿತ್ರದ ತೆಲುಗು ರೀಮೇಕ್ನಲ್ಲಿ ರಾಣಾ ದಗ್ಗುಬಾಟಿ ಅವರ ಜತೆಗೆ ಕಾಣಿಸಿಕೊಳ್ಳುವುದಕ್ಕೆ ಸಜ್ಜಾಗಿದ್ದಾರೆ.
ಇದನ್ನೂ ಓದಿ: ಈ ವರ್ಷ ಬಾಲಿವುಡ್ನಲ್ಲಿ ಗಟ್ಟಿಮೇಳ ಗಟ್ಟಿಮೇಳ …
ಈ ಮಧ್ಯೆ, ಪವನ್ ಕಲ್ಯಾಣ್, ಕೃಷ್ ನಿರ್ದೇಶನದಲ್ಲಿ ಹೊಸ ಚಿತ್ರವೊಂದರಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಈ ಕೃಷ್ ಯಾರು ಗೊತ್ತಲ್ಲಾ? ಈ ಹಿಂದೆ, ನಂದಮೂರಿ ಬಾಲಕೃಷ್ಣ ಅಭಿನಯದ 'ಗೌತಮಿಪುತ್ರ ಶಾತಕರ್ಣಿ' ಮತ್ತು 'ಕಂಚೆ' ಚಿತ್ರಗಳನ್ನು ನಿರ್ದೇಶಿಸಿದ್ದರು. ಇದೀಗ ಕೃಷ್, 'ವಿರೂಪಾಕ್ಷ' ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಇದರಲ್ಲಿ ಪವನ್ ಕಲ್ಯಾಣ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ.
ಕೊಹಿನೂರ್ ವಜ್ರದ ಕಳ್ಳತನದ ಹಿನ್ನೆಲೆಯಲ್ಲಿ ಈ ಚಿತ್ರದ ಕಥೆ ಸಾಗಲಿದ್ದು, ಈ ಚಿತ್ರದಲ್ಲಿ ಪವನ್ ಕಲ್ಯಾಣ್ ಕಳ್ಳನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ತಮ್ಮ ಪಾತ್ರಕ್ಕಾಗಿ ಪವನ್ ಕಲ್ಯಾಣ್ ಸಂಪೂರ್ಣ ಬಾಲ್ಡ್ ಆಗಬೇಕಿದೆಯಂತೆ. ಪ್ರಾಸ್ಥೆಟಿಕ್ಸ್ ಮತ್ತು ವಿಗ್ ಹಾಕಿ ಏನಾದರೂ ಮಾಡಿದರಾಯಿತು ಎಂದು ಪವನ್ ಕಲ್ಯಾಣ್ ಹೇಳಿದರಂತೆ. ಆದರೆ, ಅದಕ್ಕಿಂತ ಹೆಚ್ಚಾಗಿ ತಲೆ ಬೋಳಿಸಿಕೊಂಡರೆ ಸಖತ್ ನ್ಯಾಚುರಲ್ ಆಗಿರುತ್ತದೆ ಎಂದು ಕೃಷ್ ಹೇಳಿದ್ದಾರಂತೆ.
ತಲೆ ಬೋಳಿಸುವುದರಿಂದ ಪವನ್ಗೆ ಅಷ್ಟೇನೂ ಸಮಸ್ಯೆ ಇಲ್ಲವಂತೆ. ಆದರೆ, ತಲೆ ಬೋಳಿಸಿದರೆ, ಮುಂದಿನ ಚಿತ್ರಗಳ ಗತಿಯೇನು ಎಂಬುದು ಅವರ ಪ್ರಶ್ನೆ. ಅಷ್ಟೇ ಅಲ್ಲ, ಕೂದಲು ಬೆಳೆಯುವುದಕ್ಕೆ ಒಂದಿಷ್ಟು ಸಮಯ ಬೇಕಾಗುವದರಿಂದ, ಮತ್ತೆ ಒಂದಿಷ್ಟು ದಿನಗಳ ಕಾಲ ಸುಮ್ಮನೆ ಕಾಯಬೇಕಾಗುತ್ತದೆ ಎಂಬುದು ಪವನ್ ಯೋಚನೆ. ಅದೇ ಕಾರಣಕ್ಕೆ, ನಿರ್ದೇಶಕರ ಮಾತಿಗೆ ಒಪ್ಪುವುದೋ, ಬೇಡವೋ ಎಂಬ ತೀರ್ಮಾನಕ್ಕೆ ಅವರಿಗೆ ಬರಲಾಗುತ್ತಿಲ್ಲವಂತೆ.
ಈ ಚಿತ್ರವನ್ನು ಎ.ಎಂ. ರತ್ನಂ ನಿರ್ಮಿಸುತ್ತಿದ್ದು, ಅನಸೂಯ ಭಾರದ್ವಾಜ್ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಆಕೆ ತೆರೆಯ ಮೇಲೆ ಕೇವಲ ಅರ್ಧ ಗಂಟೆ ಬಂದರೂ, ಆಕೆಯ ಪಾತ್ರ ಇಡೀ ಚಿತ್ರಕ್ಕೆ ಒಂದು ತಿರುವು ನೀಡುತ್ತದೆ ಎಂದು ಹೇಳಲಾಗುತ್ತಿದೆ.