

ಬೆಂಗಳೂರು: ನಟಿ ಪಾವನಾ ಗೌಡ ಇದುವರೆಗೂ ಪೊಲೀಸ್ ಪಾತ್ರಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ‘ಸದ್ದು ವಿಚಾರಣೆ ನಡೆಯುತ್ತಿದೆ’ ಎಂಬ ಚಿತ್ರದಲ್ಲಿ ಮೊದಲ ಬಾರಿಗೆ ಪೊಲೀಸ್ ಪೇದೆಯಾಗಿ ನಟಿಸಿದ್ದಾರೆ. ಶೀರ್ಷಿಕೆಯೇ ಹೇಳುವಂತೆ ಇದೊಂದು ತನಿಖೆ ಹಿನ್ನೆಲೆಯಲ್ಲಿ ಸಾಗುವ ಕ್ರೖೆಂ ಥ್ರಿಲ್ಲರ್ ಶೈಲಿಯ ಕಥೆ.
ಈ ಬಗ್ಗೆ ‘ವಿಜಯವಾಣಿ’ ಜತೆಗೆ ಮಾತನಾಡುವ ಪಾವನಾ, ‘ಈ ರೀತಿಯ ಹೊಸ ಶೈಲಿಯ ಸಿನಿಮಾ ಸಿಕ್ಕಿದ್ದೇ ಖುಷಿ. ನಾನಿಲ್ಲಿ ಮೊದಲ ಸಲ ಲೇಡಿ ಪೊಲೀಸ್ ಪೇದೆಯಾಗಿದ್ದೇನೆ. ಒಂದು ಪ್ರೇಮಕಥೆಯೂ ಚಿತ್ರದಲ್ಲಿ ತೆರೆದುಕೊಳ್ಳುತ್ತದೆ. ಅಷ್ಟೇ ಅಲ್ಲದೆ, ರೋಚಕತೆಯೂ ಸಿನಿಮಾದಲ್ಲಿದೆ. ಶೀರ್ಷಿಕೆ ಹೇಳುವಂತೆ ತನಿಖೆ ನಡೆಯುತ್ತಿದೆ. ಚಿತ್ರ ಬಿಡುಗಡೆ ಆದ ಮೇಲೆ ಅದರ ಫಲಿತಾಂಶ ಗೊತ್ತಾಗಲಿದೆ’ ಎನ್ನುವ ಪಾವನಾ, ‘ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ’ ಎಂದೂ ಹೇಳುತ್ತಾರೆ.
‘ಸದ್ದು ವಿಚಾರಣೆ ನಡೆಯುತ್ತಿದೆ’ ಎಂಬ ಶೀರ್ಷಿಕೆ ಮೂಲಕವೇ ಕುತೂಹಲ ಕೆರಳಿಸುವ ಪ್ರಯತ್ನ ಮಾಡಿರುವುದು ಭಾಸ್ಕರ್ ಆರ್ ನೀನಾಸಂ. ಈ ಹಿಂದೆ ‘ಶ್ರೀಮಾನ್ ಶ್ರೀಮತಿ’, ‘ಲೌಡ್ ಸ್ಪೀಕರ್’ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿರುವ ಭಾಸ್ಕರ್, ಮೊದಲ ಸಲ ಈ ಚಿತ್ರದ ಮೂಲಕ ನಿರ್ದೇಶನದ ಅಖಾಡಕ್ಕೆ ಇಳಿದಿದ್ದಾರೆ. ‘ಮಗಳು ಜಾನಕಿ’ ಖ್ಯಾತಿಯ ರಾಕೇಶ್ ಮಯ್ಯ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಇನ್ನುಳಿದಂತೆ ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳೆ, ಮಧು ನಂದನ್, ಜಹಾಂಗೀರ್, ರಾಘು ಶಿವಮೊಗ್ಗ ಸೇರಿ ಹಲವರಿದ್ದಾರೆ. ಇತ್ತೀಚೆಗಷ್ಟೇ ಡಾಲಿ ಧನಂಜಯ್ ಈ ಚಿತ್ರದ ಫಸ್ಟ್ ಲುಕ್ ಅನಾವರಣ ಮಾಡಿ ಶುಭಕೋರಿದ್ದಾರೆ. ಅಶ್ವಿನಿ ಕೆ.ಎನ್. ಕಥೆ, ದಕ್ಷಿಣ ಮೂರ್ತಿ ಸಂಭಾಷಣೆ, ರಾಜ್ ಕಾಂತ ಕ್ಯಾಮರಾ, ಸಚಿನ್ ಬಸ್ರೂರು ಸಂಗೀತ, ಶಶಿಧರ್ ಸಂಕಲನ ಚಿತ್ರಕ್ಕಿದೆ.