paru parvathi film review: ಬಯಸಿದ ಬದುಕಿಗೆ ಸುಂದರ ಪಯಣ

paru 1
Published on

ಚಿತ್ರ: ಪಾರು ಪಾರ್ವತಿ

ನಿರ್ದೇಶನ: ರೋಹಿತ್ ಕೀರ್ತಿ

ನಿರ್ಮಾಣ: ಪಿ.ಬಿ.ಪ್ರೇಮನಾಥ್

ತಾರಾಗಣ: ದೀಪಿಕಾ ದಾಸ್, ಪೂನಂ ಸರ್ ನಾಯಕ್, ಫವಾಜ್ ಅಶ್ರಫ್​, ಕೆ.ಎಸ್.ಶ್ರೀಧರ್ ಮತ್ತಿತರರು

ಶಿವ ಸ್ಥಾವರಮಠ

ಬಯಸಿದಂತೆ ಬದುಕು ಸಿಗುವುದಿಲ್ಲ. ನೋವು-ನಲಿವು, ಕಷ್ಟ-ಸುಖ ಇದ್ದೇಯಿರುತ್ತವೆ. ಇನ್ನು ಕೆಲವರಿಗೆ ಕಾಡುವ ನೋವು, ಒಂಟಿತನ, ಖಿನ್ನತೆ ಇವುಗಳಿಂದ ಬೇಸತ್ತು ಹೊರಬರಲು ಒಂದು ದೀರ್ಘ ಪಯಣಕ್ಕೆ ಹೊರಟುಬಿಡುತ್ತಾರೆ. ಯಾರ ಅನುಮತಿಯೂ ಇಲ್ಲದೆ, ತಮ್ಮದೇ ದಾರಿಯಲ್ಲಿ ನಡೆದು, ಬಯಸಿದ ಬದುಕನ್ನು ಕಾಣುತ್ತಾರೆ. ಇಂತಹದ್ದೇ ಬಯಸಿದ ಬದುಕಿಗಾಗಿ ಹಾತೊರೆಯುವ ಇಬ್ಬರ ಕಥೆಯೇ ‘ಪಾರು ಪಾರ್ವತಿ’.

ಜೀವನದಲ್ಲಿ ಆಪ್ತವಾದ ಸಂಬಂಧವನ್ನು ಕಳೆದುಕೊಂಡಾಕೆ ಪಾಯಲ್ (ದೀಪಿಕಾ ದಾಸ್). ಇದರಿಂದ ಹೊರಬರಲು ಆಕೆ ಟ್ರಾವೆಲ್ಲರ್ ಆಗಿರುತ್ತಾಳೆ. ದೂರದೂರುಗಳಿಗೆ ಪ್ರಯಾಣಿಸಿ ಅಲ್ಲಿನ ಸಂಸ್ಕೃತಿ, ಜೀವನವನ್ನು ಅರಿಯುವ ಪ್ರಯತ್ನ ಮಾಡುತ್ತಿರುತ್ತಾಳೆ. ಆಗ ಈಕೆಗೆ ಪರಿಚಯವಾಗುವರೇ 62 ವರ್ಷದ ಪಾರು ಅಲಿಯಾಸ್ ಪಾರ್ವತಿ (ಪೂನಂ ಸರ್ ನಾಯಕ್). ಉತ್ತರಾಖಂಡದಲ್ಲಿ ಸೇನೆಯಲ್ಲಿ ಕಾರ್ಯನಿರ್ವಹಿಸುವ ಗಂಡನ ಜತೆ ತನ್ನ 50ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕು ಎಂಬುದು ಮಹದಾಸೆ. ಅದಕ್ಕಾಗಿ ಆಕೆ ಯಾವ ಸಾಹಸಕ್ಕೆ ಕೈ ಹಾಕುತ್ತಾಳೆ? 25 ವರ್ಷದ ಪಾಯಲ್‌ಗೆ 62 ವರ್ಷದ ಪಾರ್ವತಿಯ ಪರಿಚಯ ಹೇಗಾಯಿತು? ಇಬ್ಬರ ಪಯಣದ ಕಥೆಯೇನು? ಎಂಬುದನ್ನು ತಿಳಿಯಬೇಕಾದರೆ ‘ಪಾರು ಪಾರ್ವತಿ’ ಸಿನಿಮಾ ನೋಡಬೇಕಷ್ಟೇ. ನಿರ್ದೇಶಕ ರೋಹಿತ್ ಕೀರ್ತಿ ‘ ್ಫಪಾರು ಪಾರ್ವತಿ’ ಮೂಲಕ ತುಂಬಾ ಆಪ್ತವಾದ ಕಥೆ ಹೇಳಿದ್ದಾರೆ. ಮನುಷ್ಯ ತನ್ನ ಸಂತೋಷ, ನೆಮ್ಮದಿಯನ್ನು ಕಂಡುಕೊಳ್ಳುವ ರೀತಿಯನ್ನು ಫಿಲಾಸಫಿಕಲ್ ಆಗಿ ತಿಳಿಸಿದ್ದಾರೆ. ಆರಂಭದಿಂದ ಕ್ಲೈಮ್ಯಾಕ್ಸ್‌ವರೆಗೆ ಒಳ್ಳೆಯ ಮನರಂಜನೆ ನೀಡುವ ಕಥೆಯಾಗಿದ್ದು, ಸ್ವಲ್ಪ ದೀರ್ಘವಾಯಿತು ಎನಿಸುವುದು ಬಿಟ್ಟರೆ ಎಲ್ಲಿಯೂ ಬೋರ್ ಹೊಡೆಯುವುದಿಲ್ಲ. ಅದಕ್ಕೆ ತಕ್ಕ ಹಾಗೆ ಹಾಸ್ಯ, ಸಾಹಸ, ಎಮೋಷನ್ ಎಲ್ಲವನ್ನೂ ಸರಿಯಾದ ಪ್ರಮಾಣದಲ್ಲಿ ಬೆರೆಸಲಾಗಿದೆ.

ದೀಪಿಕಾ ಹಾಗೂ ಪೂನಂ ಸರ್ ನಾಯಕ್ ಸುತ್ತ ಇಡೀ ಸಿನಿಮಾ ಸಾಗುತ್ತದೆ. ದೀಪಿಕಾ ಪಾತ್ರದಲ್ಲಿ ಜೀವಿಸಿದ್ದಾರೆ. ಸಾಹಸ ದೃಶ್ಯಗಳಲ್ಲಿ ಗಮನಸೆಳೆಯುತ್ತಾರೆ. ಹಾಗೆಯೇ ಹೆಣ್ಣೊಬ್ಬಳ ಸಾಹಸಮಯ ಬದುಕನ್ನು ನಟನೆ ಮೂಲಕ ಅಮೋಘವಾಗಿ ತೋರಿಸಿಕೊಟ್ಟಿದ್ದಾರೆ. ಇನ್ನು ಪೂನಂ ಸರ್ ನಾಯಕ್, ಪಾರು ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಫರ್ವಾಜ್  ವಿಶಿಷ್ಠ ಮ್ಯಾನರಿಸಂ ಮೂಲಕ ಇಷ್ಟವಾಗುತ್ತಾರೆ. ಪಯಣದ ಮೂಲಕ ಬದುಕಿನ ಬಗ್ಗೆ ಒಳನೋಟ ನೀಡುವ ‘ಪಾರು ಪಾರ್ವತಿ’ ಪ್ರೇಕ್ಷಕರಿಗೆ ಖಂಡಿತ ಇಷ್ಟವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net