ಐದು ಭಾಷೆಗಳಲ್ಲಿ ಹಾರಲಿದೆ 'ಪಾರಿವಾಳ'

Parivala - Final
Published on

ಬೆಂಗಳೂರು: ಖ್ಯಾತ ನೃತ್ಯ ನಿರ್ದೇಶಕ ಚಿನ್ನಿಪ್ರಕಾಶ್​ ಅವರ ಅದೆಷ್ಟು ಶಿಷ್ಯಂದಿರು ಚಿತ್ರರಂಗದಲ್ಲಿ ನೃತ್ಯ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೋ ಲೆಕ್ಕ ಇಟ್ಟವರಿಲ್ಲ. ಇತ್ತೀಚೆಗೆ, ಅವರ ಮತ್ತೊಬ್ಬ ಶಿಷ್ಯ ರಾಮ್​ಕಿರಣ್​, ಹಾಡೊಂದಕ್ಕೆ ಕೊರಿಯೋಗ್ರಫಿ ಮಾಡುವುದರ ಜತೆಗೆ ಆ ಹಾಡಿನಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಈ ಹಾಡನ್ನು ಚಿನ್ನಿಪ್ರಕಾಶ್​ ಅವರು ಬಿಡುಗಡೆ ಮಾಡಿದ್ದಾರೆ.

ಅಂದಹಾಗೆ, ರಾಮ್​ಕಿರಣ್​ ನೃತ್ಯ ನಿರ್ದೇಶನ ಮಾಡುವುದರ ಜತೆಗೆ ಕಾಣಿಸಿಕೊಂಡಿರುವುದು ಸಿನಿಮಾ ಹಾಡಿನಲ್ಲಲ್ಲ, ಆಲ್ಬಂ ಹಾಡಿನಲ್ಲಿ. ಇತ್ತೀಚೆಗಷ್ಟೇ, 'ಪಬ್ಲಿಕ್ ಟಾಯ್ಲೆಟ್' ಎನ್ನುವ ಕಿರುಚಿತ್ರ ನಿರ್ಮಿಸಿದ ಭಾನವಿ ಕ್ಯಾಪ್ಚರ್ ಸಂಸ್ಥೆ ಇದೀಗ 'ಪಾರಿವಾಳ' ಎಂಬ ಆಲ್ಬಂ ವೀಡಿಯೋ ಸಾಂಗ್‍ನ್ನು ಮಾಡಿದೆ.

ಈ ಹಾಡಿನ ವಿಶೇಷತೆಯೆಂದರೆ, ಸಿಂಗಲ್ ಟೇಕ್‍ನಲ್ಲಿ ಹಾಡನ್ನು ಚಿತ್ರೀಕರಿಸಲಾಗಿರುವುದು. ಸಿಂಗಲ್​ ಟೇಕ್​ನಲ್ಲಿ ಚಿತ್ರೀಕರಣ ಮಾಡುವುದು ಹೊಸ ವಿಷಯವೇನಲ್ಲ. ಈಗಾಗಲೇ ಹಲವು ಸಿನಿಮಾ ಹಾಡುಗಳನ್ನು ಒಂದೇ ಟೇಕ್​ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಇದೇ ಮೊದಲ ಬಾರಿಗೆ ವಿಡಿಯೋ ಆಲ್ಬಂ ಹಾಡನ್ನು ಒಂದೇ ಟೇಕ್​ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಹಾಡನ್ನು ಕ್ಯಾಮೆರಾಮ್ಯಾನ್ ಅಭಿಷೇಕ್ ಜಿ.ಕಾಸರಗೋಡು ಸೆರೆಹಿಡಿದಿದ್ದಾರೆ.

ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಸೇರಿದಂತೆ 5 ಭಾಷೆಗಳಲ್ಲಿ ಈ ಪಾರಿವಾಳದ ಹಾಡು ಬಿಡುಗಡೆಯಾಗಲಿದ್ದು, ಸದ್ಯ ಕನ್ನಡ ಸಾಂಗ್ ಮಾತ್ರ ಹೊರಬಂದಿದೆ. ಮುಂದಿನ ದಿನಗಳಲ್ಲಿ ಪ್ರತಿವಾರ ಒಂದೊಂದು ಭಾಷೆಯ ಹಾಡನ್ನು ರಿಲೀಸ್ ಮಾಡುವ ಯೋಜನೆಯನ್ನು ಈ ತಂಡ ಹಮ್ಮಿಕೊಂಡಿದೆ. ಇನ್ನು ಎಲ್ಲಾ ಛಾಷೆಯಲ್ಲೂ ಗಾಯಕ ಶಶಾಂಕ್ ಶೇಷಗಿರಿ ಅವರೇ ಹಾಡಿದ್ದಾರೆ.

ಈ ಹಾಡಿನಲ್ಲಿ ಭಗ್ನಪ್ರೇಮಿಯೊಬ್ಬನ ಮನದ ವಿರಹವೇದನೆಯನ್ನು ಹೇಳಲು ಪ್ರಯತ್ನ ಮಾಡಲಾಗಿದ್ದು, ಅಗಸ್ತ್ಯ ಸಂತೋಷ್ ಇದರ ಸಾಹಿತ್ಯ ರಚಿಸಿ ರಾಗಸಂಯೋಜನೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net