ಎತ್ತರಕ್ಕೆ ಪರಿಣಿತಿ ಚೋಪ್ರಾ; ‘ಊಂಚಾಯ್’ ಚಿತ್ರಕ್ಕೆ ನಾಯಕಿ..

Parineethi
Published on

'ಹಮ್ ಆಪ್ಕೆ ಹೇ ಕೌನ್’ ಖ್ಯಾತಿಯ ಸೂರಜ್ ಬರ್ಜಾತ್ಯ ಹೇಗ್ಹೇಗೋ ಸಿನಿಮಾ ಮಾಡುವವರಲ್ಲ. ಕಥೆಯನ್ನು ಅಳೆದು-ತೂಗಿ ಆಯ್ಕೆ ಮಾಡುವ ಅವರು, ಕಳೆದ 32 ವರ್ಷಗಳಲ್ಲಿ ನಿರ್ದೇಶಿಸಿರುವುದು ಕೇವಲ ಆರು ಚಿತ್ರಗಳನ್ನು ಮಾತ್ರ. ಅದರಲ್ಲೂ ಅವರ ಕೊನೆಯ ಚಿತ್ರ ‘ಪ್ರೇಮ್ ರತನ್ ಧನ್ ಪಾಯೋ’ ಬಿಡುಗಡೆಯಾಗಿ ಆರು ವರ್ಷಗಳಾಗಿವೆ. ಆರು ವರ್ಷಗಳಿಂದ ಸುಮ್ಮನಿದ್ದ ಅವರು, ಇದೀಗ ಒಂದು ಕಥೆ ಮಾಡಿಟ್ಟುಕೊಂಡು, ಸದ್ಯದಲ್ಲೇ ಚಿತ್ರೀಕರಣ ಶುರು ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ವಿಶೇಷವೆಂದರೆ, ‘ಊಂಚಾಯ್’ (ಎತ್ತರ) ಹೆಸರಿನ ಈ ಸಿನಿಮಾಗೆ ನಾಯಕಿಯಾಗಿ ಪರಿಣಿತಿ ಚೋಪ್ರಾ ಅವರನ್ನು ಆಯ್ಕೆ ಮಾಡಿದ್ದಾರೆ. ಸೂರಜ್ ಬರ್ಜಾತ್ಯ ಚಿತ್ರಗಳೆಂದರೆ ಪರದೆ ತುಂಬಾ ಜನ ತುಂಬಿರುತ್ತಾರೆ. ಈ ಚಿತ್ರದಲ್ಲೂ ಅದನ್ನೇ ಮುಂದುವರೆಸಿದ್ದಾರೆ ಅವರು. ಅಮಿತಾಭ್ ಬಚ್ಚನ್, ಅನುಪಮ್ ಖೇರ್, ಬೋಮನ್ ಇರಾನಿ, ಡ್ಯಾನಿ, ಸಾರಿಕಾ, ನೀನಾ ಗುಪ್ತಾ ಮುಂತಾದವರು ಅಭಿನಯಿಸಿರುವ ಈ ಚಿತ್ರದಲ್ಲಿ ಪರಿಣಿತಿ ಒಬ್ಬರೇ ಚಿಕ್ಕವಯಸ್ಸಿನವರು ಎಂದರೆ ತಪ್ಪಿಲ್ಲ. 60 ಪ್ಲಸ್ ದಾಟಿದ ನಾಲ್ವರು ಹಿರಿಯರ ಕುರಿತ ಕಥೆ ಇದಾಗಿದ್ದು, ಪರಿಣಿತಿ ಒಂದು ಪ್ರಮುಖ ಪಾತ್ರ ಮಾಡುತ್ತಿದ್ದಾರಂತೆ. ಅಕ್ಟೋಬರ್​ನಲ್ಲಿ ನೇಪಾಳದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net