

ಬುಧವಾರವಷ್ಟೇ ಸುದೀಪ್ ಒಂದು ಟ್ವೀಟ್ ಮಾಡಿದ್ದರು. 'ಫ್ಯಾಂಟಮ್' ಚಿತ್ರದ ಪನ್ನಾ ಪಾತ್ರದ ಫಸ್ಟ್ ಲುಕ್ ನಾಳೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿದ್ದರು.
ಇಷ್ಟಕ್ಕೂ ಈ ಪನ್ನಾ ಯಾರು ಎಂಬ ರಹಸ್ಯವನ್ನು ಅವರು ಬಿಟ್ಟುಕೊಟ್ಟಿರಲಿಲ್ಲ. 'ಆ ಪಾತ್ರದ ಬಗ್ಗೆ ನಮ್ಮ ಸೃಷ್ಟಿಕರ್ತರೇ ಎಲ್ಲಾ ವಿಷಯಗಳನ್ನು ಹೇಳಲಿದ್ದಾರೆ. ಗುರುವಾರ ಬೆಳಿಗ್ಗೆ ಹೊಸ ಪೋಸ್ಟರ್ ಬಿಡುಗಡೆಯಾಗಲಿದೆ' ಎಂದು ಹೇಳಿದ್ದರು.
'ಫ್ಯಾಂಟಮ್' ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಇದೆ. ಇನ್ನು ಚಿತ್ರದ ಮೊದಲ ಸ್ನೀಕ್ಪೀಕ್ನಲ್ಲಿ ದೋಣಿಯಲ್ಲಿ ಸುದೀಪ್ ಜತೆಗೆ ಒಂದು ಹುಡುಗಿ ಇದ್ದಾಳೆ. ಈ ಹುಡುಗಿ ಮತ್ತು ಶ್ರದ್ಧಾ ಇಬ್ಬರಲ್ಲಿ ಪನ್ನಾ ಯಾರು? ಅಥವಾ ಇವರಿಬ್ಬರನ್ನೂ ಬಿಟ್ಟು ಪನ್ನಾ ಎಂಬ ಇನ್ನೊಂದು ಪಾತ್ರ ಯಾವುದಾದರೂ ಇದೆಯಾ? ಎಂಬ ಪ್ರಶ್ನೆಗಳು ಎಲ್ಲರನ್ನೂ ಕಾಡುತ್ತಿದ್ದವು.
ಆ ಪ್ರಶ್ನೆಗಳಿಗೆ ಇದೀಗ ಉತ್ತರ ಸಿಕ್ಕಿದೆ. ಈ ಪನ್ನಾ ಬೇರೆ ಯಾರೋ ಅಲ್ಲ, ಕಿರುತೆರೆ ನಟಿ ನೀತಾ ಅಶೋಕ್. ಈಗಾಗಲೇ, 'ಯಶೋಧೆ', 'ನಾ ನಿನ್ನ ಬಿಡಲಾರೆ' ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದ ನೀತಾ, ಈಗ ಮೊದಲ ಬಾರಿಗೆ 'ಫ್ಯಾಂಟಮ್' ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಈ ಚಿತ್ರದಲ್ಲಿ ಅಪರ್ಣಾ ಭಲ್ಲಾಳ್ ಎಂಬ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ನಿರೂಪ್ ಭಂಡಾರಿ ಜೋಡಿಯಾಗಿ ನಟಿಸಲಿದ್ದಾರಂತೆ.
ಜಾಕ್ ಮಂಜು ನಿರ್ಮಾಣ ಮಾಡುತ್ತಿರುವ 'ಫ್ಯಾಂಟಮ್' ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸುತ್ತಿದ್ದಾರೆ.