

ಬೆಂಗಳೂರು: ಈ ವರ್ಷದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ‘ವಿಜಯಾನಂದ’ ಎಲ್ಲೆಡೆ ವೈರಲ್ ಆಗಿದೆ. ಒಂದೆಡೆ ಇತ್ತೀಚೆಗಷ್ಟೇ ಚಿತ್ರತಂಡ ಪ್ಯಾನ್ ಇಂಡಿಯಾ ಪ್ರಚಾರ ಪೂರ್ಣಗೊಳಿಸಿ ವಾಪಸ್ಸಾಗಿದೆ. ಮತ್ತೊಂದೆಡೆ 32 ಟ್ಯಾಬ್ಲೋಗಳು ದೇಶದ ಮೂಲೆ ಮೂಲೆಗಳಿಗೂ ತೆರಳಿ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿವೆ. ಅದರ ಜತೆಗೆ ಸಾಮಾಜಿಕ ಜಾಲತಾಣದಲ್ಲೂ ‘ವಿಜಯಾನಂದ’ ಚಿತ್ರದ ಅಬ್ಬರ ಜೋರಾಗಿದೆ.
ಬೆರಳೆಣಿಕೆ ದಿನಗಳಲ್ಲಿಯೇ ಚಿತ್ರದ ಟ್ರೇಲರ್ ಬರೋಬ್ಬರಿ ನಾಲ್ಕು ಕೋಟಿಗೂ ಅಧಿಕ ಬಾರಿ ವೀಕ್ಷಣೆಯಾಗಿದೆ. ಕನ್ನಡದಲ್ಲಿ 1.51 ಕೋಟಿ, ಹಿಂದಿಯಲ್ಲಿ 1.20 ಕೋಟಿ, ತೆಲುಗಿನಲ್ಲಿ 60 ಲಕ್ಷ, ತಮಿಳಿನಲ್ಲಿ 44 ಲಕ್ಷ ಹಾಗೂ ಮಲಯಾಳಂನಲ್ಲಿ 34 ಲಕ್ಷ ವ್ಯೂವ್ಸ್ ಪಡೆದಿದೆ. ಆ ಮೂಲಕ ಐದು ಭಾಷೆಗಳಿಂದ ಟ್ರೇಲರ್ಗೆ 4 ಕೋಟಿಗೂ ಅಧಿಕ ವ್ಯೂವ್ಸ್ ದೊರೆತಿದೆ.
ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಜೀವನಾಧಾರಿತ ಚಿತ್ರವಾಗಿರುವ ಕಾರಣ ‘ವಿಜಯಾನಂದ’ ಬಗ್ಗೆ ದೇಶದೆಲ್ಲೆಡೆ ಜನರಲ್ಲಿ ಪ್ರಾರಂಭದಿಂದಲೂ ಕುತೂಹಲವಿದೆ. ಹಾಗೆಯೇ ಕನ್ನಡಿಗರೇ, ಕನ್ನಡದ ಸಾಧಕನ ಕುರಿತು ನಿರ್ವಿುಸಿರುವ ಮಟ್ಟ ಮೊದಲ ಬಯೋಪಿಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಚಿತ್ರದ ಬಗ್ಗೆ ಕನ್ನಡದ ಪ್ರೇಕ್ಷಕರಲ್ಲೂ ನಿರೀಕ್ಷೆ ಹೆಚ್ಚಿದೆ.
ವಿಆರ್ಎಲ್ ಸಮೂಹ ಸಂಸ್ಥೆಗಳ ಎಂಡಿ ಡಾ. ಆನಂದ ಸಂಕೇಶ್ವರ ಚೊಚ್ಚಲ ಬಾರಿಗೆ ವಿಆರ್ಎಲ್ ಫಿಲಂ ಪ್ರೊಡಕ್ಷನ್ ಬ್ಯಾನರ್ನಲ್ಲಿ ನಿರ್ವಿುಸಿರುವ ‘ವಿಜಯಾನಂದ’ ಚಿತ್ರವನ್ನು ರಿಷಿಕಾ ಶರ್ಮಾ ನಿರ್ದೇಶಿಸಿದ್ದಾರೆ. ಅನಂತ್ ನಾಗ್, ರವಿಚಂದ್ರನ್, ವಿನಯಾ ಪ್ರಸಾದ್, ನಿಹಾಲ್, ಸಿರಿ ಪ್ರಹ್ಲಾದ್, ಭರತ್ ಬೋಪಣ್ಣ, ಅರ್ಚನಾ ಕೊಟ್ಟಿಗೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ದಕ್ಷಿಣ ಭಾರತದ ಹೆಸರಾಂತ ಸಂಗೀತ ನಿರ್ದೇಶಕ ಗೋಪಿಸುಂದರ್ ಸಂಗೀತದಲ್ಲಿ ಮೂಡಿಬಂದಿರುವ ‘ಹಾಗೆ ಆದ ಆಲಿಂಗನ...’ ಹಾಡು ಈಗಾಗಲೇ ಸಂಗೀತಪ್ರಿಯರ ಮನಗೆದ್ದಿದೆ. ರಿಪಬ್ಲಿಕ್ ವಾಹಿನಿಯಲ್ಲಿ ಅರ್ನಬ್ ಗೋಸ್ವಾಮಿ ಸಂದರ್ಶಿಸಿದ ಮೊದಲ ಕನ್ನಡ ಚಿತ್ರತಂಡ ಎಂಬ ಹೆಗ್ಗಳಿಕೆ ‘ವಿಜಯಾನಂದ’ ಚಿತ್ರಕ್ಕೆ ಸಲ್ಲುತ್ತದೆ. ಇಂತಹ ಹಲವು ವಿಶೇಷತೆಗಳಿಂದ ಕೂಡಿರುವ ‘ವಿಜಯಾನಂದ’ ಚಿತ್ರ ಇದೇ ಶುಭ ಶುಕ್ರವಾರ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.
ಟ್ವಿಟರ್ನಲ್ಲಿ ವಿಜಯಾನಂದ ಎಮೋಜಿ!
ಸಾಮಾಜಿಕ ಜಾಲತಾಣದಲ್ಲೂ ‘ವಿಜಯಾನಂದ’ ಚಿತ್ರತಂಡ ಹಲವು ಹೊಸತನಗಳ ಮೂಲಕ ಜನರನ್ನು ತಲುಪುತ್ತಿದೆ. ಟ್ವಿಟರ್ ಎಮೋಜಿ ಸಿದ್ಧಪಡಿಸಲಾಗಿದ್ದು, ‘ಕೆಜಿಎಫ್’ ಚಿತ್ರದ ಬಳಿಕ ಎಮೋಜಿ ಮಾಡಿರುವ ಎರಡನೇ ಕನ್ನಡ ಚಿತ್ರತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಿಂದೆ ತಮಿಳಿನಲ್ಲಿ ರಜಿನಿಕಾಂತ್ ಅಭಿನಯದ ‘ಕಾಲ’, ವಿಜಯ್ ಅಭಿನಯದ ‘ಬೀಸ್ಟ್’, ತೆಲುಗಿನಲ್ಲಿ ಮಹೇಶ್ ಬಾಬು ನಟಿಸಿದ್ದ ‘ಸರ್ಕಾರಿ ವಾರು ಪಾಟ’, ವಿಜಯ್ ದೇವರಕೊಂಡ ಅಭಿನಯದ ‘ಲೈಗರ್’ ಸೇರಿದಂತೆ ಕೆಲವೇ ಚಿತ್ರತಂಡಗಳು ಎಮೋಜಿ ಮೂಲಕ ಪ್ರಚಾರ ಕೈಗೊಂಡಿದ್ದವು. ಈಗ ಆ ಸಾಲಿಗೆ ‘ವಿಜಯಾನಂದ’ ಚಿತ್ರ ಕೂಡ ಸೇರಿಕೊಂಡಿದೆ.