'ಪಂಪ' ಹಾಡಗಳಿಗೆ ಸಾಥ್ ನೀಡಿದ ಕನ್ನಡ ಕಟ್ಟಾಳುಗಳು ...

Pampa 1
Published on

ಬೆಂಗಳೂರು: ಹಿರಿಯ ನಿರ್ದೇಶಕ ಎಸ್​. ಮಹೇಂದರ್​ ನಿರ್ದೇಶನದ ಚಿತ್ರವೊಂದು ಬಿಡುಗಡೆಯಾಗದೆ ಕೆಲವು ವರ್ಷಗಳೇ ಆಗಿವೆ. ಇದೀಗ ಅವರು 'ಪಂಪ' ಎಂಬ ಹೊಸ ಚಿತ್ರವನ್ನು ನಿರ್ದೇಶಿಸಿದ್ದು, ಸೆಪ್ಟೆಂಬರ್​ನಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಅದಕ್ಕೂ ಮುನ್ನ 'ನಾದಬ್ರಹ್ಮ' ಹಂಸಲೇಖ ಅವರು ಚಿತ್ರಕ್ಕಾಗಿ ರಚಿಸಿರುವ ಹಾಡುಗಳನ್ನು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಅವರ ಅನುಪಸ್ಥಿತಿಯಲ್ಲಿ ಬಿಡುಗಡೆ ಮಾಡಲಾಯಿತು. ಕನ್ನಡ ಅಭಿವೃದ್ಧಿ ಪ್ರಾಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ, ಗಾಯಕ ರವೀಂದ್ರ ಸೊರಗಾವಿ, ಪತ್ರಕರ್ತ ಜೋಗಿ ಅಲ್ಲದೆ ರಕ್ಷಣಾ ವೇದಿಕೆಯ ಪ್ರಮುಖರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

'ಪಂಪ' ಚಿತ್ರವನ್ನು ಟೋಟಲ್ ಕನ್ನಡ ಮಾಲೀಕರಾದ ವಿ.ಲಕ್ಷ್ಮಿಕಾಂತ್ ನಿರ್ಮಿಸಿದ್ದಾರೆ. 'ಹರಹರ ಮಹಾದೇವ ಖ್ಯಾತಿಯ ಕೀರ್ತಿಭಾನು ನಾಯಕನಾಗಿ ನಟಿಸಿದರೆ, ನಾಯಕಿಯಾಗಿ ಸಂಗೀತಾ ಶೃಂಗೇರಿ ಇದ್ದಾರೆ. ಕನ್ನಡಾಭಿಮಾನಿ ಪ್ರೊಫೆಸರ್ ಪಂಪ ಅವರ ಹತ್ಯೆಯಾದ ಮೇಲೆ ನಡೆಯೋ ಕುತೂಹಲಕಾರಿ ಘಟನೆಗಳೇ ಈ ಚಿತ್ರದ ಕಥಾವಸ್ತು. ಹದಿಹರೆಯದ ಪ್ರೀತಿ-ಪ್ರೇಮ, ಭಾಷೆಯ ಮೇಲಿನ ಅಭಿಮಾನ ಮತ್ತು ದುರಭಿಮಾನ, ಹೋರಾಟ ಇದೆಲ್ಲವನ್ನೂ 'ಪಂಪ'ನ ಮೂಲಕ ಹೇಳಲಾಗಿದೆ.

'ಪಂಪ' ಚಿತ್ರದ ಕುರಿತು ಮಾತನಾಡುವ ಮಹೇಂದರ್, 'ಇದೊಂದು ಪೊಯಿಟಿಕ್ ಆಗಿರುವಂಥ ಮರ್ಡರ್ ಮಿಸ್ಟರಿ. ಜೊತೆಗೆ ಅದ್ಭುತವಾದ ಪ್ರೇಮಕಥೆಯೂ ಚಿತ್ರದಲ್ಲಿದೆ. ಪಾತ್ರಗಳು ನೈಜವಾಗಿರಬೇಕೆಂದು ಎಲ್ಲ ಪಾತ್ರಗಳಿಗೆ ಹೊಸ ಕಲಾವಿದರನ್ನೇ ಬಳಸಿಕೊಂಡಿದ್ದೇವೆ. ಒಂದಷ್ಟು ವಿಷಯಗಳು ನೇರವಾಗಿವೆ. ಹಳದಿ ಕಣ್ಣಿಂದ ಸಿನಿಮಾ ನೋಡಬಾರದು ಅಷ್ಟೇ. ಹಂಸಲೇಖಾ ಅವರ ಜೊತೆ ೨೬ ಚಿತ್ರಗಳನ್ನು ಮಾಡಿದ್ದೇನೆ. ಈ ಚಿತ್ರಕ್ಕೆ ಅವರೇ ಸಂಗೀತ ಸಂಯೋಜಿಸಿದ್ದಾರಾ ಎಂದು ಆಶ್ಚರ್ಯಪಡುವ ರೀತಿಯಲ್ಲಿ ಅವರು ಸಂಗೀತ ಸಂಯೋಚಿಸಿದ್ದಾರೆ' ಎನ್ನುತ್ತಾರೆ ಮಹೇಂದರ್​.

ಈ ಚಿತ್ರವನ್ನು ಮಾಡುವುದು ಬೇಡ ಎಂದು ಮಹೇಂದರ್​ ಸುಮ್ಮನಾಗಿದ್ದರಂತೆ. ಆದರೆ, ನಿರ್ಮಾಪಕರು ಬಿಡಲಿಲ್ಲವಂತೆ. 'ನಗಿಸುವುದು ಸುಲಭ, ಅಳಿಸುವುದು ಕಷ್ಟ. ಅದು ಹೃದಯದಿಂದಲೇ ಬರಬೇಕು, ಮೂರ್ನಾಲ್ಕು ಸಲ ಈ ಚಿತ್ರ ಮಾಡೋದೇ ಬೇಡ ಎಂದು ಬಿಟ್ಟಿದ್ದೆ. ನಿರ್ಮಾಪಕರು ಹಠಬಿಡೆ, ಮುಂದುವರೆಸುವಂತೆ ಮಾಡಿದರು. ಕನ್ನಡ ನೆಲದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ನೋಡಲೇಬೇಕಾದ ಕಂಟೆಂಟ್ ಈ ಚಿತ್ರದಲ್ಲಿದ್ದು, ಬೆಂಗಳೂರು, ತೀರ್ಥಳ್ಳಿ ಸುತ್ತಮುತ್ತ ಚಿತ್ರೀಕರಿಸಿದ್ದೇವೆ' ಎಂದು ಮಾಹಿತಿ ಕೊಡುತ್ತಾರೆ ಮಹೇಂದರ್​.

ನಿರ್ಮಾಪಕ ಲಕ್ಷ್ಮೀಕಾಂತ್​ ಮಾತನಾಡಿ, 'ಕನ್ನಡ ಸಾಹಿತ್ಯ, ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಬಂದ ನಾನು ಒಂದು ಸರಳವಾದ ಕಥೆ ಇಟ್ಟುಕೊಂಡು ಈ ಚಿತ್ರವನ್ನು ಮಾಡಿದ್ದೇನೆ' ಎಂದು ಹೇಳಿದರು.

ಈ ಚಿತ್ರಕ್ಕೆ ರಮೇಶ್‌ ಬಾಬು ಅವರ ಛಾಯಾಗ್ರಹಣ, ಮೋಹನ್ ಕಾಮಾಕ್ಷಿ ಅವರ ಸಂಕಲನವಿದೆ. ರಾಘವ್ ನಾಯಕ್, ಅರವಿಂದ್ ರಾವ್​, ಆದಿತ್ಯ ಶೆಟ್ಟಿ, ರೇಣುಕಾ, ರವಿ ಭಟ್, ಶ್ರೀನಿವಾಸಪ್ರಭು, ಪೃಥ್ವಿರಾಜ್, ಚಿಕ್ಕಹೆಜ್ಜಾಜಿ ಮಹದೇವ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net