

ಚಿತ್ರ: ಪಂಪ
ನಿರ್ಮಾಣ: ಟೋಟಲ್ ಕನ್ನಡ ಲಕ್ಷ್ಮೀಕಾಂತ್
ನಿರ್ದೇಶನ: ಎಸ್. ಮಹೇಂದರ್
ತಾರಾಗಣ: ಕೀರ್ತಿ ಭಾನು, ಸಂಗೀತಾ ಶೃಂಗೇರಿ, ಅರವಿಂದ ರಾವ್, ಆದಿತ್ಯ ಶೆಟ್ಟಿ, ಶ್ರೀನಿವಾಸ ಪ್ರಭು, ಪೃಥ್ವಿರಾಜ್ ಮುಂತಾದವರು
ರೇಟಿಂಗ್: 3
ಕನ್ನಡದಲ್ಲಿ ಸೆಂಟಿಮೆಂಟ್ ಚಿತ್ರಗಳಿಗೆ ಹೆಸರಾದವರು ಹಿರಿಯ ನಿರ್ದೇಶಕ ಎಸ್. ಮಹೇಂದರ್. ಅವರು ಈಗ ಮೊದಲ ಬಾರಿಗೆ ಬೇರೆ ತರಹದ್ದೊಂದು ಪ್ರುಯತ್ನ ಮಾಡಿದ್ದಾರೆ. ನಾಡು, ನುಡಿಯ ಬಗ್ಗೆ ಕಾಳಜಿ ಇರುವ ಒಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವನ್ನು ತೆರೆಗೆ ತಂದಿದ್ದಾರೆ.
'ಪಂಪ' ಚಿತ್ರವು ಪಂಚಳ್ಳಿ ಪರಶಿವಮೂರ್ತಿ (ಕೀರ್ತಿ ಭಾನು) ಎಂಬ ಕನ್ನಡ ಮೇಷ್ಟ್ರೊಬ್ಬರ ಸುತ್ತ ಸುತ್ತುತ್ತದೆ. ಕನ್ನಡ ನಾಡು, ನುಡಿಯ ಬಗ್ಗೆ ಅತೀವ ಕಾಳಜಿ ಇರುವ ಅವರ ಮೇಲೆ ಚಿತ್ರದ ಆರಂಭದಲ್ಲಿಯೇ ಆಗುಂತಕನೊಬ್ಬ ಗುಂಡು ಹಾರಿಸುತ್ತಾನೆ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳುತ್ತದೆ. ದಕ್ಷ ಅಧಿಕಾರಿಯೊಬ್ಬರಿಗೆ ಪ್ರಕರಣವನ್ನು ಬೇಧಿಸುವ ಜವಾಬ್ದಾರಿ ನೀಡಲಾಗುತ್ತದೆ. ಆ ಅಧಿಕಾರಿ ತನಿಖೆ ಮಾಡುತ್ತಿದ್ದಂತೆಯೇ ಹಲವು ವಿಷಯಗಳು ಬೆಳಕಿಗೆ ಬರುತ್ತದೆ. ಮೇಷ್ಟ್ರಿಗೆ ಲೇಖನ (ಸಂಗೀತ ಶೃಂಗೇರಿ) ಎಂಬ ಶಿಷ್ಯೆ ಇರುತ್ತಾಳೆ ಮತ್ತು ಆಕೆಗೆ ಅವರ ಮೇಲೆ ಅತೀವವಾದ ಅಭಿಮಾನವಿರುತ್ತದೆ. ಈ ಮಧ್ಯೆ, ಆಕೆಯನ್ನು ಪ್ರೀತಿಸುತ್ತಿರುವ ವಿರಾಟ್ (ಆದಿತ್ಯ ಶೆಟ್ಟಿ)ಗೆ ಅವರ ಮೇಲೆ ಸಿಕ್ಕಾಪಟ್ಟೆ ಕೋಪವಿರುತ್ತದೆ. ಆತ ಅವರ ಮನೆಯ ಸುತ್ತ ನಿಗೂಢವಾಗಿ ಓಡಾಡುತ್ತಿರುತ್ತಾನೆ. ಅವನೇ ಏನಾದರೂ ಮೇಷ್ಟ್ರನ್ನು ಕೊಂದನಾ? ಅಥವಾ ಈ ಕೊಲೆ ಪ್ರಕರಣಕ್ಕೆ ಬೇರೆ ಏನಾದರೂ ಆಂಗಲ್ ಇದೆಯಾ? ಎಂಬುದು ಗೊತ್ತಾಗಬೇಕಿದ್ದರೆ ಚಿತ್ರ ನೋಡಬೇಕು.
ಮೊದಲೇ ಹೇಳಿದಂತೆ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಇಂತಹ ಚಿತ್ರಗಳಲ್ಲಿ ನಿರೂಪಣೆ ವೇಗವಾಗಿರಬೇಕು, ಆಗಾಗ ಹೊಸಹೊಸ ತಿರುವುಗಳು ಸಿಗುತ್ತಿರಬೇಕು, ಪ್ರೇಕ್ಷಕರಿಗೆ ಪದೇಪದೇ ಆಶ್ಚರ್ಯವಾಗುತ್ತಿರಬೇಕು. ಆದರೆ, ಅಂತಹ ಸರ್ಪ್ರೈಸ್ ಅಂಶಗಳ್ಯಾವುದೂ ಇಲ್ಲ. ಮಹೇಂದರ್ ತಮ್ಮ ಹಿಂದಿನ ಚಿತ್ರಗಳಂತೆ ಮತ್ತು ಕಥೆಗಳಂತೆ ಬಹಳ ತಾಳ್ಮೆಯಿಂದ ಕಥೆ ಹೇಳುತ್ತಾ ಹೋಗುತ್ತಾರೆ. ಆದರೆ, ಆ ತಾಳ್ಮೆ ಚಿತ್ರ ನೋಡುವ ಪ್ರೇಕ್ಷಕರಿಗೆ ಇರುವುದಿಲ್ಲ.
ಇಲ್ಲಿ ಮಹೇಂದರ್ ಅವರ ಭಾಷಾಭಿಮಾನ, ಭಾಷೆಯ ಕುರಿತಾದ ಕಾಳಜಿ, ಉದ್ದೇಶ ಪ್ರಶ್ನಾತೀತ. ಹಾಗೆಯೇ, ಚಿತ್ರದಲ್ಲಿ ಪ್ರಸ್ತಾಪಿಸಿರುವ ಕೆಲವು ಅಂಶಗಳನ್ನು ನಿಜಜೀವನದಲ್ಲಿ ಕಾರ್ಯಗತ ಮಾಡಿದರೆ, ಕನ್ನಡ ಭಾಷೆಗೆ ದೊಡ್ಡ ಬಲ ಬಂದಂತಾಗುತ್ತದೆ. ಆದರೆ, ಕಾಳಜಿ ಬೇರೆ. ಚಿತ್ರ ಬೇರೆ. ಚಿತ್ರ ನೋಡಿಸಿಕೊಂಡು ಹೋಗುವುದಕ್ಕೆ ಅದರಲ್ಲೂ ಈಗಿನ ಕಾಲಘಟ್ಟದಲ್ಲಿ ಪ್ರೇಕ್ಷಕರನ್ನು ಎರಡೂವರೆ ಗಂಟೆ ಕಾಲ ಹಿಡಿದಿಡುವುದಕ್ಕೆ ರೋಚಕ ಅಂಶಗಳು ಬೇಕು. ಆದರೆ, ಮಹೇಂದರ್ ಹೊಸ ಪ್ರಯತ್ನ ಮಾಡಿದ್ದಾರೆಯೇ ಹೊರತು, ತಮ್ಮ ಹಳೆಯ ಶೈಲಿ ಇಲ್ಲೂ ಮುಂದುವರೆದಿದೆ.
ಹಾಗೆ ನೋಡಿದರೆ, ಇಲ್ಲಿ ಮಹೇಂದರ್ ಹಲವು ವಿಷಯಗಳನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಭಾಷೆಯ ಅಳಿವು ಉಳಿವಿಗಾಗಿ ಹೋರಾಟ, ಅದರ ಹಿಂದಿನ ರಾಜಕೀಯ, ಭಾಷೆಯನ್ನು ಕುಂಠಿತಗೊಳಿಸುವುದಕ್ಕೊಂದು ಮಾಫಿಯಾ, ಸರ್ಕಾರದ ಧೋರಣೆ ಹೀಗೆ ಹಲವು ವಿಷಯಗಳನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಆದರೆ, ಚಿತ್ರದ ಬಹುತೇಕ ಏನೂ ಆಗುವುದಿಲ್ಲ. ಆರಂಭದಲ್ಲೊಂದು ಕೊಲೆ, ಕೊನೆಗೆ ಕ್ಲೈಮ್ಯಾಕ್ಸ್ನಲ್ಲಿ ಸತ್ಯಾಂಶ ಬಯಲಾಗುವುದು ಬಿಟ್ಟರೆ ಮಿಕ್ಕಂತೆ ತನಿಖೆಗೆ ಇಡೀ ಸಿನಿಮಾ ಮೀಸಲಾಗಿದೆ. ಅಲ್ಲಿ ಹೆಚ್ಚೇನೂ ಆಗುವುದಿಲ್ಲ. ಹಾಗಾಗಿ, ಏನೇ ಉದ್ದೇಶ, ಕಾಳಜಿಗಳಿದ್ದರೂ 'ಪಂಪ' ಪ್ರೇಕ್ಷಕರನ್ನು ಹೆಚ್ಚಾಗಿ ಕಾಡುವುದಿಲ್ಲ.
ಅಭಿನಯದ ವಿಷಯದಲ್ಲೂ ಯಾರೂ ಕಾಡುವುದಿಲ್ಲವಾದರೂ, ಎಲ್ಲರೂ ತಮಗೆ ಕೊಟ್ಟಿರುವ ಕೆಲಸವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಕನ್ನಡಾಭಿಮಾನಿ ಪಂಪನಾಗಿ ಕೀರ್ತಿ ಭಾನು, ಸಂಗೀತಾ ಶೃಂಗೇರಿ, ಅರವಿಂದ್ ರಾವ್, ಆದಿತ್ಯ ಶೆಟ್ಟಿ, ರವಿ ಭಟ್, ಶ್ರೀನಿವಾಸ ಪ್ರಭು ಎಲ್ಲರೂ ತಮ್ಮ ತಮ್ಮ ಪಾತ್ರವನ್ನು ನಿಷ್ಠೆಯಿಂದ ಮಾಡಿದ್ದಾರೆ. ಹಂಸಲೇಖ ಅವರ ಸಾಹಿತ್ಯ ಮತ್ತು ಸಂಗೀತ ಖುಷಿಕೊಡುತ್ತದೆ. ಆದರೆ, ಅವರ ಹಿನ್ನೆಲೆ ಸಂಗೀತ ಸುಲಭವಲ್ಲ.
- ಚೇತನ್ ನಾಡಿಗೇರ್