

|ಹರ್ಷವರ್ಧನ್ ಬ್ಯಾಡನೂರು
ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕರ ದಾಳಿ, ಕಾಶ್ಮೀರವನ್ನು ಮತ್ತೆ ಹತ್ತು ವರ್ಷ ಹಿಂದಕ್ಕೆ ಕೊಂಡೊಯ್ದಿದೆ. ವಿಧಿ 370 ಹಿಂಪಡೆದ ಬಳಿಕ ಪ್ರವಾಸೋದ್ಯಮ ಚೇತರಿಸಿಕೊಂಡ ಬೆನ್ನಲ್ಲೇ, ದೇಶ, ವಿದೇಶಗಳ ಚಿತ್ರತಂಡಗಳು ಜಮ್ಮು, ಕಾಶ್ಮೀರದಲ್ಲಿ ಚಿತ್ರೀಕರಣಕ್ಕೆ ಮುಂದಾಗಿದ್ದವು. ಕಳೆದ ಐದು ವರ್ಷಗಳಲ್ಲಿ 400ಕ್ಕೂ ಹೆಚ್ಚು ಸಿನಿಮಾಗಳ ಚಿತ್ರೀಕರಣ ಹಿಮರಾಜ್ಯದಲ್ಲಿ ನಡೆದಿತ್ತು. ಆದರೆ, ಏ. 22ರಂದು ಪಾಕ್ ಬೆಂಬಲಿತ ಉಗ್ರರು, 26 ಮಂದಿ ಅಮಾಯಕರ ಬದುಕು ಕಸಿದಿದ್ದು, ಪ್ರೇಮ ಕಾಶ್ಮೀರವನ್ನು ರಕ್ತ ಕಾಶ್ಮೀರವನ್ನಾಗಿಸಿದೆ.
ಕಳೆದ ವರ್ಷ 65 ಲಕ್ಷ ವಿದೇಶಿಗರು ಸೇರಿ 2.36 ಕೋಟಿ ಪ್ರವಾಸಿಗರು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಈ ವರ್ಷ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ನಿರೀೆಯಿತ್ತು. ಹಾಗೇ ಪ್ರವಾಸೋದ್ಯಮದ ಜತೆ ಜತೆಗೆ ಸಿನಿಮಾ ಉದ್ಯಮವನ್ನೂ ಉತ್ತೇಜಿಸಲು 2021ರಲ್ಲಿ ಸಿನಿಮಾ ನೀತಿ ರೂಪಿಸಲಾಗಿತ್ತು. ಚಿತ್ರರಂಗದ ಅಭಿವೃದ್ಧಿಗಾಗಿ ಪ್ರತಿ ವರ್ಷ 100 ಕೋಟಿ ಮೀಸಲಿಟ್ಟು, ಚಲನಚಿತ್ರ ಅಭಿವೃದ್ಧಿ ಮಂಡಳಿ ಸ್ಥಾಪಿಸಲಾಗಿತ್ತು. ಜಮ್ಮು ಕಾಶ್ಮೀರ ಸಿನಿಮಾ ವಿಭಾಗದ ಮೂಲಕ ಸಿಂಗಲ್ ವಿಂಡೋ ಸೆಲ್ ಪ್ರಾರಂಭಿಸಿ, ಚಿತ್ರೀಕರಣಕ್ಕೆ ದೇಶ&ವಿದೇಶಗಳಿಂದ ಬರುವ ತಂಡಗಳಿಗೆ ಎಲ್ಲ ರೀತಿಯ ಸೌಕರ್ಯ ನೀಡಲಾಗುತ್ತಿತ್ತು. ವಿವಿಧ ಸ್ಥಳಗಳಲ್ಲಿ ಶೂಟಿಂಗ್ ನಡೆಸಲು ಅನುಮತಿ ನೀಡುವುದರ ಜತೆಗೆ ಜಿಲ್ಲಾ ಮಟ್ಟದಲ್ಲಿ ಚಲನಚಿತ್ರ ಮತ್ತು ಪ್ರಚಾರ ಸಮಿತಿಗಳನ್ನು ರಚಿಸಿ, ವ್ಯವಸ್ಥೆಯನ್ನು ಸರಳೀಕರಿಸಲಾಗಿತ್ತು. ಹಾಗೇ ಅಲ್ಲಿ ಚಿತ್ರೀಕರಣ ನಡೆಸುವ ಸಿನಿಮಾ, ಧಾರಾವಾಹಿ, ವೆಬ್ಸರಣಿ ಮತ್ತು ಡಾಕ್ಯುಮೆಂಟರಿಗಳಿಗೆ ಸಬ್ಸಿಡಿ ನೀಡುವುದು, ಜಮ್ಮು ಕಾಶ್ಮೀರ ಸಿನಿಮೋತ್ಸವ ನಡೆಸುವ ಮೂಲಕ ಚಿತ್ರರಂಗದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿತ್ತು. 2022ರಲ್ಲಿ ಪ್ರಾರಂಭವಾಗಿದ್ದ ಜಮ್ಮು ಕಾಶ್ಮೀರ ರಾಷ್ಟ್ರೀಯ ಚಲನಚಿತ್ರೋತ್ಸವ ಮೂರು ವರ್ಷಗಳ ಕಾಲ ಯಶಸ್ವಿಯಾಗಿ ನಡೆದು, 2024ರಲ್ಲಿ 50ಕ್ಕೂ ಅಧಿಕ ದೇಶಗಳಿಂದ ಸಿನಿಮಾಗಳು ಸ್ಪರ್ಧಿಸಿದ್ದವು. ಇದೇ ಖುಷಿಯಲ್ಲಿ ಈ ವರ್ಷ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಸುವ ಯೋಜನೆಯೂ ಇತ್ತು. ಹಾಗೇ 30 ವರ್ಷಗಳ ನಂತರ ಕಳೆದ ವರ್ಷದಿಂದ ಅಲ್ಲಿ ಮಲ್ಟಿಪ್ಲೆಕ್ಸ್ ಕೂಡ ಆರಂಭವಾಗಿತ್ತು. ಆದರೆ, ಈಗ ಎಲ್ಲದಕ್ಕೂ ಬ್ರೇಕ್ ಬಿದ್ದಿದೆ.
ಸಿನಿಮಾ ತಂಡಗಳು ಜಮ್ಮು ಕಾಶ್ಮೀರವನ್ನೇ ಚಿತ್ರೀಕರಣಕ್ಕೆ ಆಯ್ಕೆ ಮಾಡಿಕೊಳ್ಳಲು ಹಲವು ಕಾರಣಗಳಿವೆ. ಅದರಲ್ಲಿ ಪ್ರಮುಖವಾದುದು ನೇರ ವಿಮಾನ ಸಂಪರ್ಕ. ಬೆಂಗಳೂರು, ಮುಂಬೈ, ದೆಹಲಿ, ಹೈದರಾಬಾದ್, ಕೋಲ್ಕತ್ತಾ ಸೇರಿ ಬೇರೆ ಬೇರೆ ನಗರಗಳಿಂದ ಶ್ರೀನಗರಕ್ಕೆ ನೇರ ವಿಮಾನ ಸಂಪರ್ಕವಿದೆ. ಹಸಿರ ಸಿರಿ, ಹಿಮಚ್ಛಾದಿತ ಪರ್ವತಗಳು, ಝರಿ, ಪುರಾತನ ದೇವಾಲಯಗಳು ಸೇರಿ ಹಲವು ಬಗೆಯ ರಮಣೀಯ ಸ್ಥಳಗಳಿದ್ದು, ಪ್ರಾಕೃತಿಕ ಸೊಬಗಿನ ನಡುವೆ ರೊಮ್ಯಾಂಟಿಕ್ ಹಾಡುಗಳ ಚಿತ್ರೀಕರಣಕ್ಕೆ ಹೇಳಿ ಮಾಡಿಸಿದ ಜಾಗ ಕಾಶ್ಮೀರ. ಈ ಬಗ್ಗೆ "ಕಾಲಾಪತ್ಥರ್' ನಾಯಕ, ನಿರ್ದೇಶಕ ವಿಕ್ಕಿ ವರುಣ್, "ನಾವು "ಕಾಲಾಪತ್ಥರ್' ಚಿತ್ರಕ್ಕಾಗಿ ಮೂರು ದಿನ ಕಾಶ್ಮೀರದ ಸೋನ್ಮಾರ್ಗ್ನಲ್ಲಿ ಚಿತ್ರೀಕರಣ ನಡೆಸಿದೆವು. ಪಹಲ್ಗಾಮ್ನಿಂದ ಹತ್ತಿರವಿದ್ದರೂ, ರಸ್ತೆಯ ಮೂಲಕ 150 ಕಿಮೀ ದೂರದಲ್ಲಿರುವ ಸ್ಥಳವದು. ಕಳೆದ ವರ್ಷ ಶೂಟಿಂಗ್ಗೆ ತೆರಳಿದ್ದಾಗ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರಿದ್ದ ಕಾರಣ ಕುದುರೆಗಳ ಮೇಲೆ ಕ್ಯಾಮರಾ ಮತ್ತು ಯೂನಿಟ್ ಹೊತ್ತು ಏಳೆಂಟು ಕಿಮೀ ಒಳಗೆ ಹೋಗಿ ಚಿತ್ರೀಕರಣ ನಡೆಸಿದೆವು. ಕಾಶ್ಮೀರದ ಪ್ರಾಕೃತಿಕ ಸೊಬಗು ಬೇರೆ ಸಿಗುವುದಿಲ್ಲ. ಹಾಗೇ ಬೇರೆಡೆ ಹೋಗಲು ಅಷ್ಟು ವಿಮಾನ ಸಂಪರ್ಕವೂ ಇಲ್ಲವಾದ ಕಾರಣ ನೇರವಾಗಿ ಜಮ್ಮುಗೆ ತೆರಳಿ, ಅಲ್ಲಿಂದ ಸೋನ್ಮಾರ್ಗ್ ರಸ್ತೆಯಲ್ಲಿ ಹೋದೆವು. ಜಮ್ಮು, ಕಾಶ್ಮೀರ ಟ್ರಾವೆಲ್ಸ್, ಹೋಟೆಲ್ಗಳು, ಶಾಪಿಂಗ್ ಅಂತ ಒಂದು ರೀತಿ ಬಿಜಿನೆಸ್ ಹಬ್ನಂತೆ ಆಗುತ್ತಿತ್ತು' ಎಂದು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ.
ಬಾಲಿವುಡ್ಗೂ, ಕಾಶ್ಮೀರಕ್ಕೂ ಅವಿನಾಭಾವ ಸಂಬಂಧ. ರೊಮ್ಯಾನ್ಸ್ ಎಂದರೆ ಕಾಶ್ಮೀರ ಎನ್ನುತ್ತಿದ್ದ ಸಮಯವಿತ್ತು. ಭಾರತದ ಸ್ವಿರ್ಜಲೆಂಡ್ ಎನಿಸಿಕೊಂಡಿದ್ದ ಕಣಿವೆಯ ಹಿಮಚ್ಛಾದಿತ ಬೆಟ್ಟಗುಡ್ಡಗಳನ್ನು ಭೂಲೋಕದ ಸ್ವರ್ಗ ಎಂದು ಕರೆಯಲಾಗುತ್ತಿತ್ತು. 1949ರಲ್ಲಿ ರಾಜ್ ಕಪೂರ್ "ರ್ಬಸಾತ್' ಚಿತ್ರದ ಕೆಲ ಸನ್ನಿವೇಶಗಳನ್ನು ಕಾಶ್ಮೀರದಲ್ಲಿ ಚಿತ್ರೀಕರಿಸಿದ್ದರು. ಬಳಿಕ 1960ರ ದಶಕದಲ್ಲಿ "ಜಂಗ್ಲೀ', "ಕಾಶ್ಮೀರ್ ಕಿ ಕಲಿ', "ಜಬ್ ಜಬ್ ೂಲ್ ಖಿಲೇ' ಸೇರಿ ಹಲವು ಚಿತ್ರಗಳನ್ನು ಕಾಶ್ಮೀರದಲ್ಲಿ ಚಿತ್ರೀಕರಿಸಲಾಗಿತ್ತು. "ಕಭೀ ಕಭೀ', "ಆಪ್ ಕೀ ಕಸಮ್', "ಬಾಬಿ', "ಸಿಲ್ಸಿಲಾ', "ಬೇತಾಬ್', "ರೋಜಾ', "ದಿಲ್ ಸೇ', "ಮಿಷನ್ ಕಾಶ್ಮೀರ್', "ರಾಕ್ಸ್ಟಾರ್', "ಜಬ್ ತಕ್ ಹೈ ಜಾನ್', "ಯೇ ಜವಾನಿ ಹೈ ದಿವಾನಿ', "ಹೈವೇ', "ಹೈದರ್', "3 ಈಡಿಯಟ್ಸ್', "ರಾಜಿ',.. ಹೀಗೆ 2019ರವರೆಗೆ ಕೆಲ ಸಿನಿಮಾಗಳನ್ನು ಕಾಶ್ಮೀರದಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ಭಾರತೀಯ ಸಿನಿಮಾಗಳಲ್ಲದೇ 1983ರಲ್ಲಿ "ದ ರೇಜರ್ಸ್ ಎಡ್ಜ್' ಮತ್ತು 1986ರಲ್ಲಿ "ದ ಕ್ಲೆಂಬ್' ಎಂಬ ಹಾಲಿವುಡ್ ಚಿತ್ರಗಳ ಶೂಟಿಂಗ್ ಸಹ ಕಾಶ್ಮೀರದಲ್ಲಿ ನಡೆದಿತ್ತು. ಹಾಗೇ ಡಾ. ರಾಜಕುಮಾರ್ ಅಭಿನಯಿಸಿದ್ದ "ಶಬ್ದವೇದಿ', "ಶಂಕರ್ ಗುರು', "ಪ್ರೇಮದ ಕಾಣಿಕೆ', ಡಾ. ವಿಷ್ಣುವರ್ಧನ್ ನಟಿಸಿದ್ದ "ಮುತ್ತಿನ ಹಾರ', "ಹಿಮಪಾತ' ಸೇರಿ ಹಲವು ಕನ್ನಡ ಚಿತ್ರಗಳನ್ನು ಕಾಶ್ಮೀರದಲ್ಲಿ ಚಿತ್ರೀಕರಿಸಲಾಗಿತ್ತು. ಧ್ರುವ ಸರ್ಜಾ ಅಭಿನಯದ "ಮಾರ್ಟಿನ್', ಡಾಲಿ ಧನಂಜಯ ಅವರ "ರತ್ನನ್ ಪ್ರಪಂಚ', ಪುನೀತ್ ರಾಜಕುಮಾರ್ ನಟಿಸಿದ್ದ "ಜೇಮ್ಸ್', "777 ಚಾರ್ಲಿ' ಸೇರಿ ಹಲವು ಸಿನಿಮಾಗಳ ಚಿತ್ರೀಕರಣ ನಡೆಸಲಾಗಿದೆ. ಹಾಗೇ ರವಿಚಂದ್ರನ್ ನಾಯಕನಾಗಿ ನಟಿಸುತ್ತಿರುವ "ಪ್ಯಾರ್' ಚಿತ್ರದ ಶೂಟಿಂಗ್ ಸಹ ಜಮ್ಮು ಕಾಶ್ಮೀರದಲ್ಲಿ ನಡೆಸಲಾಗಿದೆ.
ಯುದ್ಧದ ಕಾಮೋರ್ಡದ ನಡುವೆ ಜಮ್ಮು ಕಾಶ್ಮೀರ, ವಾಘಾ ಗಡಿ ಸೇರಿ ಭಾರತ ಮತ್ತು ಪಾಕಿಸ್ತಾನದ ಗಡಿಭಾಗದಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡಲಾಗುತ್ತಿಲ್ಲ. ಕಾಶ್ಮೀರದಲ್ಲಿ ಏಪ್ರಿಲ್ನಿಂದ ಅಕ್ಟೋಬರ್ವರೆಗೂ ಹಿಮ ಬೀಳುವುದಿಲ್ಲ. ಹೀಗಾಗಿ ಈ ಸಮಯದಲ್ಲಿ ಶೂಟಿಂಗ್ಗೆ ತೆರಳುವುದು ಕಡಿಮೆ ಎನ್ನಲಾಗಿದೆ. ಚಲನಚಿತ್ರ ನಿರ್ಮಾಪಕರ ಸಂದ ಅಧ್ಯಕ್ಷ ಉಮೇಶ್ ಬಣಕಾರ್, "ಪಹಲ್ಗಾಮ್ ಟನೆಯಿಂದಾಗಿ ಜಮ್ಮು ಕಾಶ್ಮೀರ ಸೇರಿ ಗಡಿಭಾಗದ ಹಲವೆಡೆ ಚಿತ್ರೀಕರಣಕ್ಕೆ ಅನುಮತಿ ನೀಡುತ್ತಿಲ್ಲ. ಸದ್ಯ ಅಲ್ಲಿನ ಪರಿಸ್ಥಿತಿಯ ಅರಿವು ಚಿತ್ರರಂಗದವರಿಗೂ ಇರುವ ಕಾರಣ, ಆ ಕಡೆ ಯಾರೂ ಚಿತ್ರೀಕರಣಕ್ಕೆ ಹೋಗಲು ಪ್ಲಾ$್ಯನ್ ಮಾಡುವುದು ಇಲ್ಲ. ಮುಂದಿನ ದಿನಗಳಲ್ಲಿ ಏನಾಗುತ್ತದೆ ನೋಡಿಕೊಂಡು ನಂತರ ನಿರ್ಧರಿಸಲಿದ್ದೇವೆ' ಎನ್ನುತ್ತಾರೆ.