

ಬೆಂಗಳೂರು: ಕನ್ನಡದ ಹಿರಿಯ ನಟ ಸುಚೇಂದ್ರ ಪ್ರಸಾದ್ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಸಿನಿಮಾ ‘ಪದ್ಮಗಂಧಿ’. ಕಮಲದ ಹೂವಿನ ಸುತ್ತ ಇರುವ ಕಥೆ ಇದಾಗಿದ್ದು, ಕನ್ನಡ, ಹಿಂದಿ ಹಾಗೂ ಸಂಸ್ಕೃತದಲ್ಲಿ ಮೂಡಿಬರುತ್ತಿರುವುದು ವಿಶೇಷ. ಮಾಜಿ ಎಂಎಲ್‌ಸಿ, ಲೇಖಕಿ ಪ್ರೊ.ಎಸ್.ಆರ್.ಲೀಲಾ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಪೂರ್ಣಗೊಳಿಸಿರುವ ಚಿತ್ರತಂಡ ಸದ್ಯ ರಿಲೀಸ್‌ಗೆ ಸಿದ್ಧತೆ ನಡೆಸುತ್ತಿದೆ. ಇತ್ತೀಚೆಗೆ ಚಿತ್ರದ ಧ್ವನಿಸುರುಳಿ ಹಾಗೂ ಟ್ರೇಲರ್ ಬಿಡುಗಡೆಗೊಳಿಸಲಾಯಿತು. ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕಾರ್ಯಕ್ರಮಕ್ಕೆ ಆಗಮಿಸಿ, ತಂಡಕ್ಕೆ ಆಶೀರ್ವದಿಸಿದರು. ‘ಸುಚೇಂದ್ರ ಪ್ರಸಾದರು ದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ. ಕನ್ನಡ ಚಿತ್ರರಂಗ ಲಾಭದಾಯಕವಲ್ಲದ ಪರಿಸ್ಥಿತಿಯಲ್ಲಿ ಸಿನಿಮಾ ಮಾಡಿದ್ದಾರೆ. ಇನ್ನು ಸಂಸ್ಕೃತದಲ್ಲೂ ಈ ಸಿನಿಮಾ ಬರುತ್ತಿರುವುದು ಖುಷಿಯ ವಿಚಾರ. ಸಂಸ್ಕೃತ ಗಡಿ ದಾಟಿ ಸಲ್ಲುವ ಭಾಷೆ. ಈ ಮೂಲಕವಾದರೂ ಸಂಸ್ಕೃತ ಮುಖ್ಯವಾಹಿನಿಗೆ ಬರಲಿ’ ಎಂದು ಹಾರೈಸಿದರು. ಕು. ಮಹಾಪದ್ಮ, ಉಡುಪಿಯ ಪರಿಪೂರ್ಣ, ಶತಾವಧಾನಿ ಡಾ. ಆರ್. ಗಣೇಶ್, ಡಾ. ಗೌರಿ ಸುಬ್ರಹ್ಮಣ್ಯ, ಡಾ.ಪ್ರೇಮಾ, ಡಾ. ಹೇಮಂತ್ ಕುಮಾರ್ , ಡಾ. ಜಿ.ಎಲ್.ಭಟ್ ಕಲಾಬಳಗದಲ್ಲಿದ್ದಾರೆ. ಡಾ.ದೀಪಕ್ ಪರಮಶಿವನ್ ಸಂಗೀತ, ಮನುಯಪ್ಪಾರ್, ನಾಗರಾಜ್ ಅದವಾನಿ, ಗಿರಿಧರ್ ದಿವಾನ್ ಛಾಯಾಗ್ರಹಣ, ಎನ್. ನಾಗೇಶ್ ಸಂಕಲನ ಚಿತ್ರಕ್ಕಿದೆ.